September 24, 2026
Thursday, September 24, 2026
spot_img

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗದ ಒಳಗೇ ಭಿನ್ನಮತ ಸ್ಫೋಟಗೊಂಡಿರುವ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟುಮಾಡಿದೆ. ಈ ವರದಿಯನ್ನು ಅಸ್ತ್ರವಾಗಿಸಿಕೊಂಡು ಜಂಟಿ ಸುದ್ದಿಗೋಷ್ಠಿ ನಡೆಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಚುನಾವಣೆಗಳೇ ಫಿಕ್ಸ್ ಆಗ್ತಿವೆ

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದಲ್ಲಿ ನಡೆಯುತ್ತಿರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಮೊದಲೇ ಫಿಕ್ಸ ಆಗುತ್ತಿವೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿವೆ. ಮತಗಳನ್ನು ರಕ್ಷಿಸಬೇಕಾದ ಚುನಾವಣಾ ಆಯೋಗವೇ ಇಂದು ಕಳ್ಳತನಕ್ಕೆ ಸಾಥ್ ನೀಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ನಾನು ಕಳೆದ 50 ವರ್ಷಗಳಿಂದ ರಾಜಕೀಯ ಕುಟುಂಬದಲ್ಲೇ ಬೆಳೆದವನು. ಭಾರತೀಯ ರಾಜಕಾರಣದಲ್ಲಿ ‘ಆಡಳಿತ ವಿರೋಧಿ ಅಲೆ’ ಎಂಬುದು ಅತ್ಯಂತ ದೊಡ್ಡ ಶಕ್ತಿ. ಅದು ಯಾರನ್ನೂ ಬಿಡುವುದಿಲ್ಲ. ಬಾಂಗ್ಲಾದೇಶ ಯುದ್ಧ ಗೆದ್ದು ಜನಪ್ರಿಯತೆಯ ಉತ್ತುಂಗದಲ್ಲಿದ್ದ ಇಂದಿರಾ ಗಾಂಧಿಯವರೇ ಒಂದೆರಡು ವರ್ಷದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸಬೇಕಾಯಿತು. ಇದು ಎಲ್ಲಾ ಪ್ರಾದೇಶಿಕ ಮತ್ತು ಕಾಂಗ್ರೆಸ್ ನಾಯಕರಿಗೂ ಅನ್ವಯಿಸುತ್ತದೆ. ಆದರೆ, ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಮಾತ್ರ ಈ ಆಡಳಿತ ವಿರೋಧಿ ಅಲೆ ತಟ್ಟುವುದೇ ಇಲ್ಲ ಯಾಕೆ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಏನಿದು ಇಸಿ ಒಳಗಿನ ಆಂತರಿಕ ಜಗಳ?

ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿರ್ಧಾರಗಳ ವಿರುದ್ಧ ಲಿಖಿತ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಇದನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ʼಜ್ಞಾನೇಶ್ ಕುಮಾರ್ ಅವರನ್ನು ಪ್ರಧಾನಿ ಮತ್ತು ಅಮಿತ್ ಶಾ ಅವರೇ ತಮ್ಮ ಸ್ವಂತ ಇಚ್ಛೆಯಿಂದ ಆರಿಸಿಕೊಂಡಿದ್ದಾರೆ. ಈಗ ಅವರ ಕೆಳಗಿರುವ ಇಬ್ಬರು ಕಮಿಷನರ್‌ಗಳೇ ಜ್ಞಾನೇಶ್ ಕುಮಾರ್ ಅವರ ಮೇಲೆ ಪ್ರಶ್ನೆ ಎತ್ತುತ್ತಿದ್ದಾರೆ. ವೋಟಿಂಗ್ ಸಿಸ್ಟಮ್ ಹಾಳಾಗಲು ಇವರೇ ಕಾರಣ ಎಂದು ಹೇಳುತ್ತಿದ್ದಾರೆ. ಮೊದಲು ವೋಟ್ ಕಳ್ಳತನ ಮಾಡಿದರು, ಅದರಿಂದ ಕಾನೂನು ಕಳ್ಳತನ ಶುರುವಾಯಿತು, ಕೊನೆಗೆ ಇಡೀ ಸಂಸ್ಥೆಗಳನ್ನೇ ಕದಿಯುವ ಸ್ಥಿತಿ ಬಂದಿದೆʼ ಎಂದು ವಾಗ್ದಾಳಿ ನಡೆಸಿದ್ದಾರೆ.

Must Read