ಹೊಸದಿಗಂತ ವರದಿ ರಾಮನಗರ:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ(ಜಿಬಿಐಟಿ) ಯೋಜನೆ ಹಾಗೂ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿ ಭೈರಮಂಗಲ ಗ್ರಾಮದಲ್ಲಿ ಗುರುವಾರ ರೈತರಿಂದ 4ನೇ ದಿನವೂ ಉಪವಾಸ ಸತ್ಯಾಗ್ರಹ ಮುಂದುವರೆಯಿತು.
ಸೀರೆಗಳಿಂದ ತಾತ್ಕಾಲಿಕ ಸೂರು ನಿರ್ಮಿಸಿಕೊಂಡು ವಿನೂತನ ಪ್ರತಿಭಟನೆಗೆ ಮುಂದಾಗಿರುವ ರೈತರು ಹಾಗೂ ಮಹಿಳೆಯರು ಗುರುವಾರವೂ ರಸ್ತೆಬಿಟ್ಟು ಕದಲಲಿಲ್ಲ. ಪ್ರತಿಭಟನಾ ಸ್ಥಳದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗೆ ಬೆಳಿಗ್ಗೆ ಪೂಜೆ ಸಲ್ಲಿಸಿ ಉಪವಾಸ ಸತ್ಯಾಗ್ರಹ ಮುಂದುವರೆಸಿದರು. ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲೆ ಹಾಸಿಗೆ ಹಾಗೂ ಕುರ್ಚಿಗಳನ್ನು ಹಾಕಿ ನಿರಸನ ಆರಂಭಿಸಿರುವ ಕಾರಣ ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು ಪರ್ಯಾಯ ಮಾರ್ಗವನ್ನು ಬದಲಾಯಿಸಲಾಗಿದೆ.
ಭೈರಮಂಗಲ ಗ್ರಾಮದ ವೃತ್ತದಲ್ಲಿ ಪ್ರತಿಭಟನಾಕಾರರು ನಡುರಸ್ತೆಯಲ್ಲೆ ಕುಳಿತು ಧರಣಿ ನಡೆಸುತ್ತಿದ್ದು ಬುಧವಾರ ವರ್ತಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ರೈತರ ಹೋರಾಟವನ್ನು ಬೆಂಬಲಿಸಿದ್ದರು. ಗುರುವಾರ ಬೆಳಿಗ್ಗೆ ಎಂದಿನಂತೆ ತಮ್ಮ ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ವಹಿವಾಟು ಆರಂಭಿಸಿದರು.
ಕಳೆದ ಒಂದೂವರೆ ವರ್ಷದಿಂದ ರೈತರು ಪ್ರತಿಭಟನಾ ಧರಣಿ ನಡೆಸುತ್ತಿದ್ದು ಸ್ಥಳೀಯ ಶಾಸಕರಾಗಲಿ ಜಿಲ್ಲಾಧಿಕಾರಿಯಾಗಲಿ ಒಮ್ಮೆಯೂ ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸಿಲ್ಲ. ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುವ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಜುಲೈ 14ರಂದು ತಮ್ಮ ಕಚೇರಿಯಲ್ಲಿ ರೈತಮುಖಂಡರ ಸಭೆಕರೆದು 2 ತಿಂಗಳೊಳಗೆ ಪರಿಶೀಲನಾ ಸಮಿತಿ ರಚಿಸುವುದಾಗಿ ಹೇಳಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎನ್ನುವುದು ಪ್ರತಿಭಟನಾನಿರತ ರೈತರ ಆರೋಪವಾಗಿದೆ.
ಈ ನಡುವೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಪರಿಶೀಲನಾ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ. ಸಮಗ್ರ ಉಪನಗರ ಯೋಜನೆಯನ್ನು ಕಾನೂನಾತ್ಮಕ ಮಾನವೀಯ ಹಾಗೂ ಸಮಗ್ರ ಅಭಿವೃದ್ಧಿಯ ಚೌಕಟ್ಟಿನಲ್ಲಿ ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ಐವರು ಸದಸ್ಯರನ್ನು ಒಳಗೊಂಡಂತೆ ಸಲಹಾ ಸಮಿತಿಯನ್ನು ರಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಸ್ಟೀಸ್ ಗುಹನಾಥನ್ ನರೇಂದರ್ ಅವರು ಸೆ.24ರ ಗುರುವಾರ ಪ್ರಕಟಣೆಯೊಂದನ್ನು ಹೊರೆಡಿಸಿದ್ದು ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿರುವ ಭೂಮಾಲೀಕರು ಹಾಗೂ ರೈತರು ಸೆ.30 ಮತ್ತು ಅಕ್ಟೋಬರ್ 1ರ ಬೆಳಿಗ್ಗೆ 11.30ರಿಂದ ಸಂಜೆ 4 ಗಂಟೆಯವರೆಗೆ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಾವು ಲಭ್ಯವಿದ್ದು ತಮ್ಮ ಮನವಿ ಮತ್ತು ಅಹವಾಲುಗಳನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಸೆ.30ರಂದು ರಾಮನಗರ ತಾಲೂಕು ಬಿಡದಿ ಹೋಬಳಿಯ ಭೈರಮಂಗಲ, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ ಹಾಗೂ ಮಂಡಲಹಳ್ಳಿ ಅಕ್ಟೋಬರ್ 1 ರಂದು ಹೊಸೂರು, ಕಂಚುಗಾರನಹಳ್ಳಿ, ಅರಳಾಳುಸಂದ್ರ ಮತ್ತು ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿ ಗ್ರಾಮಗಳ ರೈತರ ಮನವಿ ಮತ್ತು ಅಹವಾಲು ಸ್ವೀಕರಿಸಲಾಗುವುದು.
ಅಹವಾಲು ಸಲ್ಲಿಸಲು ಇಚ್ಛಿಸುವ ರೈತರು ಭೂಮಾಲೀಕರು ಬಿಡದಿಯ ಉಪತಹಸೀಲ್ದಾರ್ ಕಚೇರಿಯಲ್ಲಿ ತಮ್ಮ ಜಮೀನಿನ ಆರ್‍ಟಿಸಿ(ಪಹಣಿ) ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ತೋರಿಸಿ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಈ ರೀತಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡವರು ಮಾತ್ರ ನಿಗದಿತ ಅವಧಿಯಲ್ಲಿ ಮನವಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಯೋಜನೆಯ ಪಾಲುದಾರರು, ಭಾಗೀದಾರರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಯೋಜನೆಗೆ ಸಂಬಂಧಿಸಿದ ತಮ್ಮ ಅಹವಾಲು ಸಲಹೆಗಳನ್ನು ನೀಡಲು ಇಚ್ಚಿಸಿದಲ್ಲಿ ಲಿಖಿತ ರೂಪದಲ್ಲಿ ಅಕ್ಟೋಬರ್ 3ರ ಸಂಜೆ 5 ಗಂಟೆಯೊಳಗೆ ಬೆಂಗಳೂರಿನ ವಸಂತನಗರದಲ್ಲಿರುವ ಬಿಎಂಆರ್‍ಡಿಎ ಕಚೇರಿಯಲ್ಲಿ ಪರಿಶೀಲನಾ ಸಮಿತಿ ಸದಸ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಲು ಜಸ್ಟೀಸ್ ಗುಹನಾಥನ್ ನರೇಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



