ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಿಂದ ಭಾರತಕ್ಕೆ ಮತ್ತೊಂದು ಹೆಮ್ಮೆಯ ಸುದ್ದಿ ಸಿಕ್ಕಿದೆ. ಶನಿವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ತಂಡ ವಿಭಾಗದಲ್ಲಿ ಭಾರತದ ಮಹಿಳಾ ಶೂಟರ್ಗಳು ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಜೊತೆಗೆ ಭಾರತದ ಇಬ್ಬರು ತಾರೆಗಳಾದ ತಿಲೋತ್ತಮಾ ಸೇನ್ ಮತ್ತು ವಿದರ್ಸಾ ಕೆ. ವಿನೋದ್ ವೈಯಕ್ತಿಕ ವಿಭಾಗದ ಫೈನಲ್ ತಲುಪಿ ಪದಕದ ಆಶಯವನ್ನು ಜೀವಂತವಾಗಿರಿಸಿದ್ದಾರೆ.
ಭಾರತದ ತಿಲೋತ್ತಮಾ ಸೇನ್, ವಿದರ್ಸಾ ಕೆ. ವಿನೋದ್ ಹಾಗೂ ಆಶಿ ಚೌಕ್ಸಿ ಅವರ ತ್ರಿವಳಿ ಜೋಡಿ ಒಟ್ಟು 1763-90x ಅಂಕಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದೆ. ಈ ವಿಭಾಗದಲ್ಲಿ ಚೀನಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ವೈಯಕ್ತಿಕ ಸ್ಕೋರ್
ತಿಲೋತ್ತಮಾ ಸೇನ್ ತಂಡದಲ್ಲಿ 590 ಅಂಕಗಳನ್ನು ಗಳಿಸಿ ಭಾರತದ ಪರ ಅತಿ ಹೆಚ್ಚು ಸ್ಕೋರ್ ಮಾಡಿದ ಆಟಗಾರ್ತಿಯಾಗಿದ್ದಾರೆ. ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಇವರು 3ನೇ ಸ್ಥಾನ ಪಡೆದು ಫೈನಲ್ ಲಗ್ಗೆ ಇಟ್ಟಿದ್ದಾರೆ. ವಿದರ್ಸಾ ಕೆ. ವಿನೋದ್ ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ, ನಂತರ ಚೇತರಿಸಿಕೊಂಡು 588 ಅಂಕಗಳೊಂದಿಗೆ 6ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರು. ಆಶಿ ಚೌಕ್ಸಿ ಅವರು 585 ಅಂಕಗಳನ್ನು ಗಳಿಸಿ ತಂಡದ ಬೆಳ್ಳಿ ಪದಕಕ್ಕೆ ನೆರವಾದರೂ, ಕೂದಲೆಳೆ ಅಂತರದಲ್ಲಿ ವೈಯಕ್ತಿಕ ಫೈನಲ್ ತಲುಪುವ ಅವಕಾಶ ತಪ್ಪಿಸಿಕೊಂಡರು.
ಮ್ಯಾರಥಾನ್ನಲ್ಲಿ ಐತಿಹಾಸಿಕ ಸಾಧನೆ
ಇದೇ ವೇಳೆ ಭಾರತದ ಅಥ್ಲೆಟಿಕ್ಸ್ನಲ್ಲೂ ಗುಡ್ ನ್ಯೂಸ್ ಸಿಕ್ಕಿದೆ. ಭಾರತದ ಸಾವನ್ ಬರ್ವಾಲ್ ಪುರುಷರ ಮ್ಯಾರಥಾನ್ನಲ್ಲಿ ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ. ಅವರು 2:11:37 ಗಂಟೆಗಳಲ್ಲಿ ರೇಸ್ ಮುಗಿಸುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ.
ಬ್ಯಾಡ್ಮಿಂಟನ್ನಲ್ಲಿ ಲಕ್ಷ್ಯ ಸೇನ್ಗೆ ನಿರಾಸೆ
ಒಂದೆಡೆ ಪದಕಗಳ ಬೇಟೆ ನಡೆಯುತ್ತಿದ್ದರೆ, ಬ್ಯಾಡ್ಮಿಂಟನ್ ಅಂಗಳದಿಂದ ಭಾರತಕ್ಕೆ ಬೇಸರದ ಸುದ್ದಿಯೊಂದು ಬಂದಿದೆ. ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನಲ್ಲಿ ಸಿಂಗಾಪುರದ ಲೋ ಕೀನ್ ಯೂ ವಿರುದ್ಧ 12-21, 21-15, 14-21 ಸೆಟ್ಗಳಿಂದ ಸೋತು ಕೂಟದಿಂದ ಹೊರಬಿದ್ದಿದ್ದಾರೆ.



