ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದೊಂದಿಗೆ ಹಳಸಿದ ರಾಜತಾಂತ್ರಿಕ ಬಾಂಧವ್ಯವನ್ನು ಮರುಸ್ಥಾಪಿಸಲು ಹೆಜ್ಜೆ ಇಡುತ್ತಿರುವ ಬಾಂಗ್ಲಾದೇಶಕ್ಕೆ ಇಸ್ಲಾಮಾಬಾದ್ ಭಾರೀ ಆಘಾತ ನೀಡಿದೆ.
ಬಾಂಗ್ಲಾದೇಶದ ಮಹತ್ವಾಕಾಂಕ್ಷೆಯ ‘ರೂಪ್‌ಪುರ ಅಣು ವಿದ್ಯುತ್ ಸ್ಥಾವರ’ಕ್ಕೆ ಬೇಕಾಗುವ ಪರಮಾಣು ಇಂಧನವನ್ನು ಹೊತ್ತು ತರುತ್ತಿದ್ದ ರಷ್ಯಾದ ಕಾರ್ಗೋ ವಿಮಾನಕ್ಕೆ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನಿರಾಕರಿಸಿದೆ. ಕಳೆದ ಕೆಲವು ದಶಕಗಳಲ್ಲೇ ಅತ್ಯಂತ ಭೀಕರ ಇಂಧನ ಮತ್ತು ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ಪಾಕಿಸ್ತಾನದ ಈ ಹಠಾತ್ ನಡೆ ದೊಡ್ಡ ಆಘಾತ ತಂದಿಟ್ಟಿದೆ.
ರಷ್ಯಾ ವಿಮಾನದ ಹಾದಿಗೆ ಪಾಕ್ ತಡೆ
ಬಾಂಗ್ಲಾದೇಶದ ಮೊದಲ ಪರಮಾಣು ಸ್ಥಾವರದ 2ನೇ ಘಟಕಕ್ಕೆ ಬೇಕಾದ ಮೊದಲ ಬ್ಯಾಚ್‌ನ ಇಂಧನವು ಸೆ. 24 ರಂದೇ ಢಾಕಾ ತಲುಪಬೇಕಿತ್ತು. ಈ ಯೋಜನೆಯ ಜವಾಬ್ದಾರಿ ಹೊತ್ತಿರುವ ರಷ್ಯಾದ ಸರ್ಕಾರಿ ಸ್ವಾಮ್ಯದ ಅಣುಶಕ್ತಿ ಸಂಸ್ಥೆ ‘ರೋಸಟಾಮ್’ ಇಂಧನ ಪೂರೈಕೆಯ ಉಸ್ತುವಾರಿ ವಹಿಸಿಕೊಂಡಿದೆ.
ಈ ರಷ್ಯಾದ ವಿಮಾನವು ಅಜೆರ್ಬೈಜಾನ್, ಕಜಕಿಸ್ತಾನ, ಪಾಕಿಸ್ತಾನ ಮತ್ತು ಭಾರತದ ವಾಯುಗಡಿಗಳನ್ನು ದಾಟಿ ಢಾಕಾದಲ್ಲಿ ಇಳಿಯಬೇಕಿತ್ತು. ವಿಮಾನಕ್ಕೆ ಪಾಕ್ ವಾಯುಗಡಿ ಬಳಸಲು ಅನುಮತಿ ಸಿಗದಿರುವುದು ನಿಜ, ಆದರೆ ಅದಕ್ಕೆ ನಿಖರ ಕಾರಣವೇನು ಎಂಬುದು ಇನ್ನು ನಿಗೂಢವಾಗಿದೆ ಎಂದು ಬಾಂಗ್ಲಾದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಕೀರ್ ಮಹಬೂಬ್ ಅನಮ್ ಅಸಮಾಧಾನ ಹೊರಹಾಕಿದ್ದಾರೆ.
6 ಗಂಟೆಗಳ ಕತ್ತಲೆ; ಅಕ್ಟೋಬರ್‌ಗೆ ವಿತರಣೆ ಮರುಸಂಗ್ರಹ
ಪಾಕಿಸ್ತಾನದ ತಡೆಯಿಂದಾಗಿ ರೋಸಟಾಮ್ ಸಂಸ್ಥೆಯು ಈಗ ಬದಲಿ ಮಾರ್ಗದ ಮೂಲಕ ಇಂಧನ ಸಾಗಣೆಗೆ ಪ್ಲ್ಯಾನ್ ಮಾಡಿದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಬರಬೇಕಾಗಿದ್ದ ಇಂಧನ ಪೂರೈಕೆಯನ್ನು ಅಕ್ಟೋಬರ್ ತಿಂಗಳಿಗೆ ಮುಂದೂಡಲಾಗಿದೆ. ಇನ್ನುಳಿದ ಇಂಧನದ ಬ್ಯಾಚ್‌ಗಳನ್ನು ಡಿಸೆಂಬರ್ ಒಳಗೆ 7 ಪ್ರತ್ಯೇಕ ಕಾರ್ಗೋ ವಿಮಾನಗಳ ಮೂಲಕ ತಲುಪಿಸುವುದಾಗಿ ರಷ್ಯಾ ಭರವಸೆ ನೀಡಿದೆ.
ಪ್ರಸ್ತುತ ಅಮೆರಿಕ-ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಗ್ಯಾಸ್ ಆಮದು ಕುಸಿದಿದ್ದು, ಬಾಂಗ್ಲಾದೇಶದಲ್ಲಿ ವಿದ್ಯುತ್ ಸಮಸ್ಯೆ ತಾರಕಕ್ಕೇರಿದೆ. ಗ್ರಾಮೀಣ ಭಾಗದಲ್ಲಿ ಬರೋಬ್ಬರಿ 10 ರಿಂದ 16 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಆಸ್ಪತ್ರೆಗಳಲ್ಲಿ ನರ್ಸ್‌ಗಳು ಟಾರ್ಚ್ ಹಿಡಿದು ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿಯಿದೆ. ದೇಶದ ಆರ್ಥಿಕ ಬೆನ್ನೆಲುಬಾಗಿರುವ ಗಾರ್ಮೆಂಟ್ಸ್ ಗಳು, ಫಾರ್ಮಾಸ್ಯುಟಿಕಲ್ಸ್ ಮತ್ತು ಆಹಾರ ಉತ್ಪಾದನಾ ಘಟಕಗಳು ವಿದ್ಯುತ್ ಇಲ್ಲದೆ ಉತ್ಪಾದನೆಯನ್ನು ಕಡಿತಗೊಳಿಸಿವೆ. ಇದು ತಾರಿಕ್ ರೆಹಮಾನ್ ನೇತೃತ್ವದ ನೂತನ ಸರ್ಕಾರಕ್ಕೆ ದೊಡ್ಡ ಅಗ್ನಿಪರೀಕ್ಷೆಯಾಗಿದೆ.
ಇದನ್ನೂ ಓದಿ:
ಇದು ಕೇವಲ ತಾಂತ್ರಿಕ ಸಮಸ್ಯೆ
ಈ ಘಟನೆಯ ಬೆನ್ನಲ್ಲೇ ತೇಪೆ ಹಚ್ಚಲು ಮುಂದಾಗಿರುವ ಢಾಕಾದಲ್ಲಿರುವ ಪಾಕಿಸ್ತಾನ ಹೈಕಮಿಷನ್, ಇದು ಯಾವುದೇ ರಾಜಕೀಯ ಉದ್ದೇಶವಲ್ಲ, ಕೇವಲ ತಾಂತ್ರಿಕ ಲೋಪಗಳಿಂದ ಉಂಟಾಗಿರುವ ಘಟನೆ. ಇದಕ್ಕೆ ಹೆಚ್ಚಿನ ರಾಜಕೀಯ ಬಣ್ಣ ಬಳಿದು ಉಭಯ ದೇಶಗಳ ಬಾಂಧವ್ಯಕ್ಕೆ ಧಕ್ಕೆ ತರುವುದು ಬೇಡ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಸೋಮವಾರವಷ್ಟೇ ಪಾಕ್ ಹೈಕಮಿಷನರ್ ಇಮ್ರಾನ್ ಹೈದರ್ ಅವರು ಬಾಂಗ್ಲಾದ ವಿದೇಶಾಂಗ ಸಚಿವ ಹುಮಾಯೂನ್ ಕೊಬೀರ್ ಅವರನ್ನು ಭೇಟಿ ಮಾಡಿದ್ದರೂ, ಸಭೆಯಲ್ಲಿ ವಾಯುಗಡಿ ವಿವಾದ ಪ್ರಸ್ತಾಪವಾಗಿಲ್ಲ ಎಂದು ಬಾಂಗ್ಲಾ ತಿಳಿಸಿದೆ.
ಪದ್ಮಾ ನದಿಯ ದಂಡೆಯ ಮೇಲೆ ನಿರ್ಮಾಣವಾಗುತ್ತಿರುವ ಈ ರೂಪ್‌ಪುರ ಯೋಜನೆ ಯಶಸ್ವಿಯಾದರೆ ಬಾಂಗ್ಲಾದೇಶವು ವಿಶ್ವದ 33ನೇ ಪರಮಾಣು ವಿದ್ಯುತ್ ಉತ್ಪಾದಿಸುವ ದೇಶವಾಗಲಿದ್ದು, ಸದ್ಯ ಭಾರತದಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತಿರುವ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ.



