ಹೊಸದಿಗಂತ ವರದಿ ರಾಮನಗರ:
ತಾವರೆಕೆರೆ ಸಮೀಪ ಪತ್ತೆಯಾಗಿದ್ದ ನಕಲಿ ಔಷಧಿ ತಯಾರಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಸೋಮವಾರ ಮಾಗಡಿಯ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತು.
ಮಾಗಡಿ ತಾಲೂಕು ಒಂದನೇ ಹೆಚ್ಚುವರಿ ಸವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶಿಶಿರ್.ಆರ್ ಅವರ ಮುಂದೆ ಆರೋಪಿಯನ್ನು ಹಾಜರು ಪಡಿಸಿದ ಎಸ್‌ಐಟಿ ಅಧಿಕಾರಿಗಳು, ಬಂಧಿತ ಆರೋಪಿಯಿಂದ ಹಲವು ಮಾಹಿತಿಯನ್ನು ಕಲೆ ಹಾಕಬೇಕಿರುವ ಕಾರಣಕ್ಕೆ ಆರೋಪಿಯನ್ನು 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿಮಾಡಿದರು. ಪೊಲೀಸರ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಅ.7ವರೆಗೆ ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡಿತು.
ಇದನ್ನೂ ಓದಿ:
ಆ.18ರಂದು ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿ.ಕೆ.ತಾಂಡ್ಯ ಗ್ರಾಮದ ಬಳಿ ಫಾರಂ ಹೌಸ್ ಮೇಲೆ ದಾಳಿಮಾಡಿದ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ತಂಡ 5 ಕೋಟಿ ರೂ. ಮೌಲ್ಯದ ನಕಲಿ ಔಷಧಿಯನ್ನು ವಶಕ್ಕೆ ಪಡೆದುಕೊಂಡಿದ್ದರು.
ಪ್ರಮುಖ ಕಂಪನಿಗಳ ಔಷಧಿಗಳ ಲೇಬಲ್ ಬಳಸಿ ನಕಲಿ ಔಷಧಿಗಳನ್ನು ಫಾರಂ ಹೌಸ್‌ನಲ್ಲಿ ತಯಾರಿಸುವ ಜೊತೆಗೆ, ಅವಧಿ ಮುಗಿದ ಔಷಧಿಗಳಿಗೂ ರೀಲೇಬಲಿಂಗ್ ಮಾಡಿ ಮಾರಾಟ ಮಾಡುತ್ತಿರುವುದು ದಾಳಿಯಿಂದ ಬೆಳಕಿಗೆ ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಶಾಂತ್ ತಲೆಮರೆಸಿಕೊಂಡಿದ್ದು ಅಜರ್‌ಬೈಜಾನ್ ದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಪೊಲೀಸ್ ಇಲಾಖೆ ಲುಕ್‌ಔಟ್ ನೋಟೀಸ್ ಹೊರಡಿಸಿತ್ತು.
ಸೋಮವಾರ ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಎಸ್‌ಐಟಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.



