September 29, 2026
Tuesday, September 29, 2026
spot_img

ಕಥುವಾದ CISF ಕ್ಯಾಂಪ್‌ನಲ್ಲಿ ಗುಂಡಿನ ಸದ್ದು: ಸಹೋದ್ಯೋಗಿಯಿಂದಲೇ ನಾಲ್ವರು ಸಿಬ್ಬಂದಿಯ ಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆಯ ಶಿಬಿರದಲ್ಲೇ ನಡೆದ ಗುಂಡಿನ ದಾಳಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಸೇವಾ ಜಲವಿದ್ಯುತ್ ಯೋಜನೆಗೆ ನಿಯೋಜಿಸಲಾಗಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿಯ ನಡುವೆ ನಡೆದಿದೆ ಎನ್ನಲಾದ ವಾಗ್ವಾದದ ಬಳಿಕ ಸಹೋದ್ಯೋಗಿಯೊಬ್ಬರು ಗುಂಡು ಹಾರಿಸಿದ್ದು, ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.

ಏನಿದು ಘಟನೆ?

ಬಸೋಹ್ಲಿ ಪ್ರದೇಶದ ಸೇವಾ-II ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ CISF ಶಿಬಿರದಲ್ಲಿ ಮಂಗಳವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, 2009ನೇ ಬ್ಯಾಚ್‌ನ ಹೆಡ್ ಕಾನ್‌ಸ್ಟೆಬಲ್‌ ಒಬ್ಬರು ಸಹೋದ್ಯೋಗಿಗಳೊಂದಿಗೆ ಮಾತಿನ ಚಕಮಕಿಯ ಬಳಿಕ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡಿನ ದಾಳಿಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆ ಬಳಿಕ ಆರೋಪಿಯಾಗಿರುವ ಸಿಬ್ಬಂದಿಯನ್ನು ಸಹೋದ್ಯೋಗಿಗಳು ನಿಯಂತ್ರಣಕ್ಕೆ ತೆಗೆದುಕೊಂಡು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕಥುವಾ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಗುಂಡಿನ ದಾಳಿಗೆ ಕಾರಣವಾದ ನಿಖರ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:

ವರದಿಗಳ ಪ್ರಕಾರ, ಮೃತಪಟ್ಟವರಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಮತ್ತು ಕಂಪನಿ ಕಮಾಂಡರ್ ಅಂಕಿತ್ ಕುಮಾರ್ ಪಾಂಡೆ, ಸಬ್‌ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್ ಹಾಗೂ ಕಾನ್‌ಸ್ಟೆಬಲ್‌ಗಳಾದ ಸಂಜೀವ್ ಕುಮಾರ್ ಮತ್ತು ಮೊಹಮ್ಮದ್ ರಫೀಕ್ ಸೇರಿದ್ದಾರೆ. ಘಟನೆಯ ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.

ಘಟನೆಯ ಕುರಿತು CISF ವತಿಯಿಂದಲೂ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ಸಹೋದ್ಯೋಗಿಗಳ ನಡುವಿನ ವಾಗ್ವಾದ ಹೇಗೆ ಮಾರಕ ಗುಂಡಿನ ದಾಳಿಗೆ ತಿರುಗಿತು ಎಂಬುದರ ಕುರಿತು ತನಿಖಾ ವರದಿಯಿಂದ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

Must Read