ಹೊಸದಿಗಂತ ಡಿಜಿಉಟಲ್ ಡೆಸ್ಕ್:
ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಬಿಜೆಪಿಯು ದೊಡ್ಡ ಮಟ್ಟದ ಕ್ರಿಮಿನಲ್ ಪಿತೂರಿ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಹಲಸೂರಿನಲ್ಲಿ ಒಂದೇ ಮುಸ್ಲಿಂ ಕುಟುಂಬದ ಎಂಟು ಮಂದಿಯ ಹೆಸರುಗಳನ್ನು ಧರ್ಮದ ಆಧಾರದ ಮೇಲೆ ಗುರಿಯಾಗಿಸಿ, ಪಟ್ಟಿಯಿಂದ ತೆಗೆದುಹಾಕಲು ಸ್ಥಳೀಯ ಬಿಜೆಪಿ ನಾಯಕರೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಧ್ಯಮ ವರದಿಯ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.
‘ಫಾರ್ಮ್ 7’ ದುರ್ಬಳಕೆ – ದೇಶದ ಅತಿ ದೊಡ್ಡ ಹಗರಣ
ಮತದಾರರ ಪಟ್ಟಿಯಲ್ಲಿರುವ ಹೆಸರಿನ ವಿರುದ್ಧ ಆಕ್ಷೇಪಣೆ ಎತ್ತಲು ಅಥವಾ ಹೆಸರನ್ನು ತೆಗೆದುಹಾಕಲು ಬಳಸುವ ‘ಫಾರ್ಮ್ 7’ ಅನ್ನು ಬಿಜೆಪಿ ಕಾರ್ಯಕರ್ತರು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ದೂರಿದ್ದಾರೆ. ನನ್ನ ರಾಜಕೀಯ ಮತ್ತು ಅಧಿಕೃತ ತಂಡಗಳ ಮೂಲಕ ತನಿಖೆ ನಡೆಸಿದ ಬಳಿಕವೇ ನಾನು ಈ ಸತ್ಯವನ್ನು ಬಹಿರಂಗಪಡಿಸುತ್ತಿದ್ದೇನೆ. ಕಾಂಗ್ರೆಸ್ನ ಸಾಂಪ್ರದಾಯಿಕ ಮತದಾರರಾದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಶೋಷಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡಲಾಗುತ್ತಿದೆ ಎಂದರು. ಲಕ್ಷಾಂತರ ಫಾರ್ಮ್ಗಳನ್ನು ಮುದ್ರಿಸಿ ಹಂಚಲಾಗಿದ್ದು, ಪರಿಚಯವೇ ಇಲ್ಲದ ಮತದಾರರ ಹೆಸರುಗಳ ಮೇಲೆ ನೂರಾರು ಜನರಿಂದ ಸಹಿ ಪಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಿಯಮಗಳ ಅಡಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 1.07 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಒಟ್ಟು ಮತದಾರರ ಸಂಖ್ಯೆ 4.46 ಕೋಟಿಗೆ ಕುಸಿದಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು. ಇದೇ ವಿಚಾರವಾಗಿ ಕಳೆದ ಗುರುವಾರ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ, ಸಚಿವರು ಮತ್ತು ಶಾಸಕರೊಂದಿಗೆ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರ ಕಚೇರಿ ಮುಂದೆ ಡಿ.ಕೆ. ಶಿವಕುಮಾರ್ ಸುಮಾರು 5 ಗಂಟೆಗಳ ಕಾಲ ಧರಣಿ ನಡೆಸಿದ್ದರು. ಸುಳ್ಳು ಮಾಹಿತಿ ನೀಡಿ ಫಾರ್ಮ್ 7 ಸಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ಭರವಸೆ ನೀಡಿದ ಬಳಿಕ ಧರಣಿ ಕೊನೆಗೊಂಡಿತ್ತು.
ಎಪಿಕ್ ನಂಬರ್ ಸಿಕ್ಕಿದ್ದು ಹೇಗೆ?
ಮೂಡಿಗೆರೆಯಲ್ಲಿ 6,259, ಬೆಳಗಾವಿ ಉತ್ತರದಲ್ಲಿ ಸುಮಾರು 3,000 ಮತ್ತು ಭಾಲ್ಕಿಯಲ್ಲಿ 2,285 ಮತಗಳನ್ನು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. “ನಮ್ಮ ಸ್ವಂತ ಕುಟುಂಬದ ಸದಸ್ಯರ ವೋಟರ್ ಐಡಿ (EPIC) ನಂಬರ್ ನಮಗೇ ನೆನಪಿರುವುದಿಲ್ಲ. ಆದರೆ, ಇವರಿಗೆ ಇಷ್ಟೊಂದು ಜನರ ಐಡಿ ನಂಬರ್ಗಳು ಹೇಗೆ ಸಿಕ್ಕವು? ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ 10,000 ದಿಂದ 20,000 ಮತಗಳನ್ನು ಡಿಲೀಟ್ ಮಾಡಲು ವ್ಯವಸ್ಥಿತ ಸಂಚು ನಡೆದಿದೆ. ಈ ಬಗ್ಗೆ ಬೂತ್ ಮಟ್ಟದಲ್ಲಿ ಸಂಪೂರ್ಣ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ FIR ದಾಖಲಾಗಬೇಕು ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.



