ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬರ ಜೊತೆ ಪೊಲೀಸ್ ಸಿಬ್ಬಂದಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎನ್ನುವ ಘಟನೆಯನ್ನು ವಿರೋಧಿಸಿ ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 3 ರಂದು ಜಂತರ್ ಮಂತರ್ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಮೂವರು ಮಹಿಳಾ ಪತ್ರಕರ್ತೆಯರು ದೆಹಲಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ನಿಷ್ಪಕ್ಷಪಾತ ತನಿಖೆಗಾಗಿ ಈ ದೂರುಗಳನ್ನು ಅಪರಾಧ ವಿಭಾಗಕ್ಕೆ (ಕ್ರೈಮ್ ಬ್ರಾಂಚ್) ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. 48 ಗಂಟೆಗಳ ನಂತರ ನಮ್ಮ ದೂರಿನ ಪ್ರಸ್ತುತದ ಸ್ಥಿತಿಗತಿಯನ್ನು ತಿಳಿಯಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಪ್ರತಿಭಟನಾಕಾರರೊಬ್ಬರು ಮಾಹಿತಿ ನೀಡಿದ್ದಾರೆ.ದೆಹಲಿ ಪೊಲೀಸ್ ಸಿಬ್ಬಂದಿಯ ವಿರುದ್ಧ ಆರೋಪ ಮಾಡಿರುವ ಮಹಿಳಾ ಪತ್ರಕರ್ತೆಯರಿಗೆ ಸಿಜೆಪಿ ಬೆಂಬಲ ಸೂಚಿಸಿದೆ. ಸಿಜೆಪಿ ವಕ್ತಾರ ಸೌರವ್ ದಾಸ್ ಮತ್ತು ಇತರ ಪ್ರತಿಭಟನಾಕಾರರು ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.



