ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ದಸರಾ ಮಹೋತ್ಸವದಲ್ಲಿ ಹಲವು ವರ್ಷಗಳಿಂದ ಭಾಗಿಯಾಗುತ್ತಿರುವ ಹಿರಿಯ ಆನೆ ಅಭಿಮನ್ಯು ಇಂದು ಸಾಂಸ್ಕೃತಿಕ ನಗರಿಯ ಅರಮನೆಯನ್ನು ಪ್ರವೇಶಿಸಿದೆ.
2026ರ ಮೈಸೂರು ದಸರಾ ಮಹೋತ್ಸವಕ್ಕೆ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ಜಂಬೂ ಸವಾರಿಯ ಸಂದರ್ಭದಲ್ಲಿ ನಿಶಾನೆ ಆನೆಗೆ ವಿಶೇಷ ಸ್ಥಾನವಿದ್ದು, ಆನೆಗಳ ತಂಡದ ಮೆರವಣಿಗೆಗೆ ಅದು ಮುನ್ನಡೆ ನೀಡುತ್ತದೆ. ದಸರಾ ಮಹೋತ್ಸವದ ಸಿದ್ಧತೆಗಳ ಈ ಹಂತದಲ್ಲಿ ಮೈಸೂರು ಅರಮನೆ ಪ್ರಮುಖ ಕೇಂದ್ರವಾಗಿದ್ದು, ಅದ್ಧೂರಿ ಉತ್ಸವಕ್ಕೆ ನಗರ ನಿಧಾನವಾಗಿ ಸಜ್ಜಾಗುತ್ತಿರುವುದು ಕಂಡುಬರುತ್ತಿದೆ.
ಈ ಬಾರಿಯ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಭಾಗವಹಿಸುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಮಹತ್ವದ್ದಾಗಿದೆ. ಹಿರಿಯ ಆನೆ ಅಭಿಮನ್ಯು ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಬಳಿಕ ದಸರಾ ಕಾರ್ಯಕ್ರಮಗಳಿಂದ ವಿದಾಯ ಪಡೆಯಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿತ್ತು.
ದಸರಾ ಮಹೋತ್ಸವದೊಂದಿಗೆ ಅಭಿಮನ್ಯು ಹೊಂದಿರುವ ದೀರ್ಘಕಾಲದ ನಂಟಿಗೆ ಅಂತಿಮ ವಿದಾಯ ಹೇಳುವ ಮುನ್ನ, ಈ ಬಾರಿಯ ಉತ್ಸವದಲ್ಲಿ ಅದು ಭಾಗವಹಿಸಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಇದೀಗ ಅಭಿಮಾನಿಗಳ ಆಸೆಯಂತೆ ಅಭಿಮನ್ಯು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.
ಜಂಬೂ ಸವಾರಿಯ ಮೆರವಣಿಗೆಯಲ್ಲಿ ಸತತ ಆರು ವರ್ಷ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ ಕ್ಯಾಪ್ಟನ್ ಅಭಿಮನ್ಯುಗೆ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ ಸಿಕ್ಕಿದೆ. ಜಯಮಾರ್ತಾಂಡ ದ್ವಾರದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದೆ. ಗಂಧದಗುಡಿ ಫೌಂಡೇಶನ್ ಮತ್ತು ಅಭಿಮನ್ಯು ಅಭಿಮಾನಿಗಳಿಂದ ಬೃಹತ್ ಮೋಸಂಬಿ ಹಾರ, 10 ಕೆಜಿ ತೂಕದ ಬೃಹತ್ ಪೇಟ ನೀಡಲಾಗಿದ್ದರೆ, ಫಲತಾಂಬೂಲ ನೀಡಿ ಅರಮನೆ ಮಂಡಳಿ ಆನೆಯನ್ನು ಬರಮಾಡಿಕೊಂಡಿದೆ.



