ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಆಫ್ರಿಕಾದ ಕಾಂಗೋದಲ್ಲಿ ಮತ್ತೊಂದು ಭೀಕರ ದೋಣಿ ದುರಂತ ಸಂಭವಿಸಿದ್ದು, ಎರಡು ಮೋಟಾರ್ ಚಾಲಿತ ಮರದ ದೋಣಿಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ಈ ದುರಂತ ಭಾನುವಾರ ಸಂಜೆ ಈಕ್ವಟೇರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಪ್ರದೇಶದ ಸಮೀಪ ಕಾಂಗೋ ನದಿಯಲ್ಲಿ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಅಪಘಾತಕ್ಕೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ ರಾತ್ರಿ ವೇಳೆ ನದಿಯಲ್ಲಿ ದೋಣಿ ಸಂಚಾರ ನಡೆಸುವುದು ಇಂತಹ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:
ಅಪಘಾತಕ್ಕೀಡಾದ ದೋಣಿಗಳ ಪೈಕಿ ಒಂದು ವಾಯವ್ಯ ಭಾಗದ ಉಬಾಂಗಿಯಿಂದ ರಾಜಧಾನಿ ಕಿನ್ಶಾಸಾಗೆ ತೆರಳುತ್ತಿತ್ತು. ಮತ್ತೊಂದು ದೋಣಿ ಕಿನ್ಶಾಸಾದಿಂದ ಲುಕೋಲೆಲಾ ಕಡೆಗೆ ಪ್ರಯಾಣಿಸುತ್ತಿತ್ತು. ಲುಕೋಲೆಲಾ ಸಮೀಪವೇ ಎರಡೂ ದೋಣಿಗಳು ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಒಂದು ದೋಣಿ ನದಿಯಲ್ಲಿ ಮುಳುಗಿದ್ದು, ಅದರಲ್ಲಿದ್ದ ಹಲವು ಪ್ರಯಾಣಿಕರು ನೀರಿನೊಳಗೆ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ದೋಣಿ ದುರಂತಗಳು ಹೊಸದಲ್ಲ
ಕಾಂಗೋದಲ್ಲಿ ದೋಣಿ ದುರಂತಗಳು ಹೊಸದೇನಲ್ಲ. ರಾತ್ರಿ ವೇಳೆ ಸಂಚಾರ, ಪ್ರಯಾಣಿಕರ ಮಿತಿಮೀರಿದ ಸಂಖ್ಯೆ, ಕಳಪೆ ಸುರಕ್ಷತಾ ವ್ಯವಸ್ಥೆ ಮತ್ತು ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯದ ಕೊರತೆ ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ. ಕಳೆದ ಜುಲೈನಲ್ಲಿ ರಾಜ್ಯಮಟ್ಟದ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಗಳನ್ನು ಹೊತ್ತ ಮರದ ದೋಣಿ ಮುಳುಗಿ ಕನಿಷ್ಠ 20 ಮಂದಿ ಮೃತಪಟ್ಟಿದ್ದರು.



