ಹೊಸದಿಗಂತ ವರದಿ ದಾವಣಗೆರೆ:
ಉತ್ತಮ ಕಥಾವಸ್ತು ಹೊಂದಿರುವ ಬೇಲ್ ಸಿನಿಮಾವನ್ನು ಎಲ್ಲರೂ ಕುಟುಂಬ ಸಮೇತರಾಗಿ ಬಂದು ನೋಡಿ ಆಶೀರ್ವದಿಸಿ ಎಂದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಮನವಿ ಮಾಡಿದರು.
ನಗರದ ತ್ರಿಶೂಲ್ ಚಿತ್ರಮಂದಿರಕ್ಕೆ ಸೋಮವಾರ ಬೇಲ್ ಚಿತ್ರದ ಪ್ರಮೋಷನ್ ಗೆ ಚಿತ್ರತಂಡದೊಂದಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದಾವಣಗೆರೆಗೆ ಸಾಕಷ್ಟು ಬಾರಿ ಬಂದಿದ್ದೇನೆ. ಇತ್ತೀಚೆಗೆ ವೇದ, ಕರಟಕ ದಮನಕ, ಭೈರತಿ ರಣಗಲ್ ಸೇರಿದಂತೆ ಅನೇಕ ಸಿನಿಮಾ ಪ್ರಮೋಷನ್ ಗೆ ಬಂದಿದ್ದೆ. ರಾಜ್ಯಾದ್ಯಂತ ಬೇಲ್ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು, ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
ನನಗೆ ತಂದೆಯವರಂತೆ ಭಕ್ತ ಕುಂಬಾರ ಸಿನಿಮಾ ಮಾಡಬೇಕೆಂಬ ಕನಸು ಇದೆ. ನಾನು ವಿಭಿನ್ನ ಗೆಟಪ್ ನಲ್ಲಿರುವ ಬೇಲ್ ಸಿನಿಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಈ ಚಿತ್ರದಲ್ಲಿ ಸಾಯಿಕುಮಾರ್ ಹಾಗೂ ಜಯರಾಮ್ ಸುಬ್ರಹ್ಮಣ್ಯಂ ಕಾಂಬಿನೇಷನ್ ಜನರಿಗೆ ತುಂಬಾ ಇಷ್ಟವಾಗಿದೆ. ಲೂಸ್ ಮಾದ ಯೋಗೇಶ್, ದೀಕ್ಷಿತ್, ಸಂಜನಾ ಆನಂದ್, ಸಂಗೀತಾ ಕ್ರಿಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮುಂದೆ ಬೇಲ್-2 ತಯಾರಿ ನಿರೀಕ್ಷೆಯಲ್ಲಿದೆ. ಇದು ನನ್ನ 131ನೇ ಸಿನಿಮಾ ಆಗಿದ್ದು, ಮುಂದೆ ಎ-ಫಾರ್ ಆನಂದ್, ಜೈಲರ್-2 ಸಹಿತ ಹಲವು ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ನನ್ನ ಎಲ್ಲಾ ಸಿನಿಮಾಗಳಿಗೆ ದಾವಣಗೆರೆ ಜನತೆ ತುಂಬಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅಪ್ಪಾಜಿ ಕಾಲದಿಂದಲೂ ಕೂಡ ದಾವಣಗೆರೆ ಅಭಿಮಾನಿಗಳು ನಮ್ಮ ಸಿನಿಮಾಗಳನ್ನು ಶತದಿನೋತ್ಸವ, 25 ವಾರಗಳವರೆಗೆ ಚೆನ್ನಾಗಿ ಪ್ರದರ್ಶನ ಕಾಣುವಂತೆ ಮಾಡಿದ್ದಾರೆ. ಎಲ್ಲೆಡೆ ಬೇಲ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವುದು ತುಂಬಾ ಮುಖ್ಯ. ಆದ್ದರಿಂದ ಎಲ್ಲರೂ ಚಿತ್ರಮಂದಿಗಳಿಗೆ ಬಂದು ಬೇಲ್ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಅವರು ವಿನಂತಿಸಿದರು.
ಚಿತ್ರದ ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, ಬೇಲ್ ಚಿತ್ರ ಉತ್ತಮ ಕಥೆ ಹೊಂದಿದೆ. ವಿಭಿನ್ನ ಕಥೆ ಜೊತೆಗೆ ಶಿವಣ್ಣ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ನೇಹಿತರು ಹಾಗೂ ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡಿ ಶುಭ ಹಾರೈಸಿರಿ ಎಂದರು.
ಚಿತ್ರದ ಸಹನಟ ದೀಕ್ಷಿತ್, ಚಿತ್ರಮಂದಿರದ ಮಾಲೀಕರಾದ ಕೆ.ಆರ್.ವೀರಣ್ಣ, ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಯೋಗೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ನಟ ಶಿವರಾಜಕುಮಾರ್ ಚಿತ್ರಮಂದಿರಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಣ್ಣ ಬಣ್ಣದ ಪೇಪರ್ ಬ್ಲಾಸ್ಟ್ ಮಾಡುವ ಮೂಲಕ ನೆಚ್ಚಿನ ನಟನನ್ನು ಸ್ವಾಗತಿಸಿದರು.



