ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಇಂದಿಗೆ ಸತತ ೨೫ ವರ್ಷಗಳ ಅಧಿಕಾರವನ್ನು ಪೂರೈಸಿದ್ದಾರೆ. ಈ ಅಪರೂಪದ ಸಾಧನೆ ಮಾಡಿದ ಕೆಲವೇ ನಾಯಕರಲ್ಲಿ ಪ್ರಧಾನಿ ಮೋದಿಯೂ ಒಬ್ಬರು. ಈ ದಿನದ ಸವಿನೆನಪಿಗಾಗಿ ಬಿಜೆಪಿ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದೆ.
ಮೋದಿ 2001ರ ಅ.7ರಂದು ಮೊದಲ ಬಾರಿಗೆ ಗುಜರಾತ್ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಆಡಳಿತಾತ್ಮಕ ಪಯಣ ಪ್ರಾರಂಭಿಸಿದ್ದರು. ನಂತರ ದೇಶದ ಪ್ರಧಾನಿ ಆಗುವ ಮೂಲಕ ಅವರು ಅಧಿಕಾರದಿಂದ ಈವರೆಗೆ ಒಂದು ದಿನವೂ ಕೆಳಗಿಳಿದಿಲ್ಲ. ಪ್ರಧಾನಿ ಮೋದಿ ಅವರ ಈ 25 ವರ್ಷಗಳ ಸಾರ್ವಜನಿಕ ಸೇವೆಯ ನೆನಪಿಗಾಗಿ, ಬಿಜೆಪಿ ದೇಶಾದ್ಯಂತ ಸೆ,17ರಿಂದ ಅ.17 ರವರೆಗೆ 1 ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ಎಂಬ ವಿಶೇಷ ಜನಸಂಪರ್ಕ ಮತ್ತು ಸ್ವಯಂಸೇವಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ವಿನಾಯಕ ದೇವಸ್ಥಾನಕ್ಕೆ ಭೇಟಿ
ಪ್ರಧಾನಿ ಮೋದಿ ಅವರು ಸಾರ್ವಜನಿಕ ಜೀವನದ 25 ವರ್ಷಗಳ ಸೇವೆ ಪೂರೈಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನಾ ಮುಹೂರ್ತದಂತಹ ವೈದಿಕ ಆಚರಣೆಗಳನ್ನು ನಡೆಸಲಾಯಿತು. ಸರಸ್ವತಿ, ನರ್ಮದಾ, ಸಿಂಧು, ಕಾವೇರೀ ನದಿಗಳಿಗೆ ಸಂಬಂಧಿಸಿದಂತೆ ಪವಿತ್ರ ಜಲದ ಸನ್ನಿಧಾನವನ್ನು ಕುರಿತು ಮಂತ್ರಗಳನ್ನು ಉಚ್ಚರಿಸಲಾಯಿತು.
ಪ್ರಧಾನಿಯವರು ನಂತರ ʼಓಂ ನಮಸ್ತೇ ಭಗವನ್ ವಿಶ್ವೇಶ್ವರಾಯ ಮಹಾದೇವಾಯʼ ಎಂಬ ಶಿವ ಮಂತ್ರವನ್ನು ಪಠಿಸಿ, ಶಿವನಿಗೆ ಅರ್ಪಣೆಗಳನ್ನು ಸಲ್ಲಿಸಿದರು. ಕೊನೆಯಲ್ಲಿ, ಅವರು ಪಾಪಗಳ ಕ್ಷಮೆ ಮತ್ತು ರಕ್ಷಣೆಗಾಗಿ ʼಪಾಪೋಹಂ ಪಾಪಕರ್ಮಾಹಂ, ತ್ರಾಹಿ ಮಾಂ ಕೃಪಯಾ ದೇವʼ ಎಂಬ ಭಕ್ತಿಯ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಆಧ್ಯಾತ್ಮಿಕ ಭೇಟಿಯು ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಮೋದಿ ಅವರ ಬದ್ಧತೆ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ದೇಶದ ಕಲ್ಯಾಣಕ್ಕಾಗಿ ಅವರು ಭಗವಂತನ ಆಶೀರ್ವಾದ ಕೋರಿದರು.



