ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕ ಸೇವೆಯಲ್ಲಿ ಸಾಟಿಯಿಲ್ಲದ ಮೈಲಿಗಲ್ಲು ಸ್ಥಾಪಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಸರ್ಕಾರದ ಮುಖ್ಯಸ್ಥರಾಗಿ ಇಂದು ಸತತ 25 ವರ್ಷಗಳ ಐತಿಹಾಸಿಕ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.
ಪ್ರಧಾನಿಯವರ 25 ವರ್ಷಗಳ ಆಡಳಿತವನ್ನು ಸ್ಮರಿಸಲು ಬಿಜೆಪಿ ಸೆ.17ರಿಂದ ಅಕ್ಟೋಬರ್ 17 ರವರೆಗೆ ಅಂದರೆ ಒಂದು ತಿಂಗಳ ಕಾಲ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ. ಸೇವಾ ಸಂಕಲ್ಪ ಅಭಿಯಾನದ ವೇಳೆ ತಮ್ಮ ಕೈಲಾದ ಸೇವೆಯನ್ನು ಮಾಡಲಾಗುತ್ತದೆ. ಸೆಲೆಬ್ರಿಟಿಗಳಿಂದ ಹಿಡಿದು ಗಣ್ಯ ವ್ಯಕ್ತಿಗಳವರೆಗೆ ಎಲ್ಲರೂ ತಮ್ಮ ಕೈಲಾದ ಸಾಮಾಜಿಕ ಸೇವೆಯನ್ನು ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮಾಡುತ್ತಿದ್ದಾರೆ.
ಇಂದು ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಲಕ್ಷಾಂತರ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮುಂದಿನ ವಿಕಸಿತ ಭಾರತದ ಮಾರ್ಗಸೂಚಿ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮಗಳೇನು?
ಕಾರ್ಯಕರ್ತರು, ಗುಜರಾತ್ನ ವಡ್ನಗರ ಹಾಗೂ ಸಂಸದೀಯ ಕ್ಷೇತ್ರ ವಾರಣಾಸಿಯಿಂದ ಹೊರಟು ಏಳು ರಾಜ್ಯಗಳ ಹಳ್ಳಿ ಹಳ್ಳಿಗಳಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಾ ಸಾಗಿರುವ ಯಾತ್ರೆ ಇಂದಿಗೆ ಮುಕ್ತಾಯವಾಗಿದೆ.
ಮೋಟಾರ್ ಸೈಕಲ್ ರ್ಯಾಲಿಯಲ್ಲಿ ಭಾಗಿಯಾಗಿರುವ ಯುವಕರನ್ನು ಅ.10ರಂದು ಪ್ರಧಾನಿ ಮೋದಿ ಪೂಸಾದಲ್ಲಿ ಭೇಟಿಯಾಗಿ ಸಂವಾದ ನಡೆಸಲಿದ್ದಾರೆ.
ಇನ್ನು ಪ್ರಧಾನಿ ಮೋದಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಮಹಿಳೆಯರು ಮನೆಯಲ್ಲಿ ಆಶೀರ್ವಾದದ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸಂವಾದಗಳು, ವ್ಯಾಪಕ ಸಸಿ ನೆಡುವಿಕೆ , ಪ್ಲಾಸ್ಟಿಕ್ ಮುಕ್ತ ಭಾರತದ ಜನಜಾಗೃತಿ ಮತ್ತು ಯುವ ಸಮುದಾಯಕ್ಕೆ ಸೈಬರ್ ಭದ್ರತಾ ಕಾರ್ಯಾಗಾರಗಳು ದೇಶದ ಪ್ರತಿ ಬೂತ್ ಮಟ್ಟದಲ್ಲಿ ನಡೆಯುತ್ತಿವೆ.



