ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದ ಆಡಳಿತ ಮುಖ್ಯಸ್ಥರಾಗಿ ಸತತ 25 ವರುಷ ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ತಮ್ಮ ಈ ಮಹತ್ವದ ಐತಿಹಾಸಿಕ ಮೈಲಿಗಲ್ಲಿಗೆ ಜಾಗತಿಕ ನಾಯಕರು ಶುಭ ಹಾರೈಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
2001 ರಿಂದ 2026 ರವರೆಗಿನ ಪಯಣ
ಅ. 7,2001 ರಂದು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲಿಂದ ಆರಂಭವಾದ ಇವರ ರಾಜಕೀಯ ಪಯಣ, 2014 ರಲ್ಲಿ ದೇಶದ ಪ್ರಧಾನಿಯಾಗಿ ಮುಂದುವರಿದು, ಇಂದು ಯಶಸ್ವಿಯಾಗಿ 25 ವರ್ಷಗಳ ಸತತ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಇಷ್ಟು ಸುದೀರ್ಘ ಕಾಲ ಅಡೆತಡೆಯಿಲ್ಲದೆ ಆಡಳಿತ ನಡೆಸಿರುವುದು ಒಂದು ಅಪರೂಪದ ಸಾಧನೆಯಾಗಿದೆ.
ಮೋದಿ ನಾಯಕತ್ವಕ್ಕೆ ಜಗತ್ತೇ ಸಲಾಂ
ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು, ಜಪಾನ್ ಪ್ರಧಾನಿ ಸನಾಯೆ ಟಕೈಚಿ, ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್, ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಹಾಗೂ ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೇ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರು ಪ್ರಧಾನಿ ಮೋದಿಯವರ ‘ಅಪ್ರತಿಮ ರಾಜಕೀಯ ನಾಯಕತ್ವ’ ಮತ್ತು ಭಾರತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ರೀತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಜಾಗತಿಕ ನಾಯಕರಿಗೆ ಪ್ರಧಾನಿ ಧನ್ಯವಾದ
ವಿಶ್ವ ನಾಯಕರ ಶುಭಾಶಯಗಳಿಗೆ ಪ್ರತ್ಯೇಕವಾಗಿ ಉತ್ತರಿಸಿರುವ ಪ್ರಧಾನಿ ಮೋದಿ, ನೈಜೀರಿಯಾ ಅಧ್ಯಕ್ಷರಿಗೆ ಧನ್ಯವಾದ ತಿಳಿಸುತ್ತಾ, ‘ಭಾರತ ಮತ್ತು ನೈಜೀರಿಯಾಗಳು ಜಾಗತಿಕ ದಕ್ಷಿಣದ ‘ ಪ್ರಮುಖ ಧ್ವನಿಗಳಾಗಿದ್ದು, ಹೆಚ್ಚು ಅಂತರ್ಗತ ಹಾಗೂ ಶಾಂತಿಯುತ ಜಗತ್ತನ್ನು ನಿರ್ಮಿಸಲು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ. ಇನ್ನು ಬೋಟ್ಸ್ವಾನಾ ಅಧ್ಯಕ್ಷ ಡುಮಾ ಬೊಕೊ ಅವರ ಹಾರೈಕೆಗೂ ಪ್ರತಿಕ್ರಿಯಿಸಿರುವ ಅವರು, ಆಫ್ರಿಕನ್ ರಾಷ್ಟ್ರಗಳೊಂದಿಗಿನ ಸ್ನೇಹಕ್ಕೆ ಭಾರತ ಸದಾ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಕೇಂದ್ರ ಸಚಿವ ಸಂಪುಟವು ಕೂಡ ಪ್ರಧಾನಿ ಮೋದಿಯವರ ಈ ಆರು ದಶಕಗಳ ಸಾರ್ವಜನಿಕ ಜೀವನ ಹಾಗೂ 25 ವರ್ಷಗಳ ‘ದೇಶ ಮೊದಲು ಮತ್ತು ನಾಗರಿಕ ಮೊದಲು’ ಎಂಬ ತತ್ವದ ಆಡಳಿತಕ್ಕೆ ವಿಶೇಷ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಿ ಗೌರವ ಸಲ್ಲಿಸಿದೆ.



