ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ಗೆ ಬಂದಿದ್ದ ಐಷಾರಾಮಿ ಜಾಗ್ವಾರ್ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾದ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಜೂಜುವಾಡಿಯಲ್ಲಿ ನಡೆದಿದೆ.
ಕಾರು ಪೆಟ್ರೋಲ್ ಪಂಪ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಹಾಗೂ ಪೆಟ್ರೋಲ್ ಬಂಕ್ನ ಒಂದು ಭಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ಸಂಭವಿಸದೆ ತಪ್ಪಿದೆ.
ಏನಿದು ಘಟನೆ?
ಕೂಡ್ಲು ಗ್ರಾಮದ ಸಂಜಯ್ ಎಂಬವರಿಗೆ ಸೇರಿದ ಜಾಗ್ವಾರ್ ಕಾರು ಬುಧವಾರ ರಾತ್ರಿ ಜೂಜುವಾಡಿಯ ಹೆಚ್ಪಿ ಪೆಟ್ರೋಲ್ ಬಂಕ್ಗೆ ಬಂದಿತ್ತು. ಪೆಟ್ರೋಲ್ ತುಂಬಿಸಲು ಕಾರನ್ನು ಪಂಪ್ ಸಮೀಪ ನಿಲ್ಲಿಸಲಾಗಿತ್ತು. ಈ ವೇಳೆ ಬಂಕ್ ಸಿಬ್ಬಂದಿ ಕಾರನ್ನು ಸ್ವಲ್ಪ ಹಿಂದಕ್ಕೆ ತೆಗೆದುಕೊಳ್ಳುವಂತೆ ಚಾಲಕನಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕಾರನ್ನು ರಿವರ್ಸ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ್ದಾರೆ ಎನ್ನಲಾಗಿದೆ. ಪರಿಣಾಮ ಕಾರು ವೇಗವಾಗಿ ಹಿಂದಕ್ಕೆ ಚಲಿಸಿ ಪೆಟ್ರೋಲ್ ಪಂಪ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಂಪ್ನ ಇಂಧನ ತುಂಬಿಸುವ ಗನ್ ಭಾಗದಲ್ಲಿ ಸ್ಪಾರ್ಕ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಇದನ್ನೂ ಓದಿ:
ಬೆಂಕಿ ಕಾಣಿಸಿಕೊಂಡ ಕೂಡಲೇ ಕಾರಿನಲ್ಲಿದ್ದ ಸಂಜಯ್ ಹಾಗೂ ಅವರೊಂದಿಗೆ ಇದ್ದ ಮಹಿಳೆ ತಕ್ಷಣ ಹೊರಬಂದು ಸ್ಥಳದಿಂದ ದೂರ ಸರಿದಿದ್ದಾರೆ. ನಂತರ ಬೆಂಕಿ ಕಾರನ್ನು ಸಂಪೂರ್ಣ ಆವರಿಸಿದ್ದು, ಪೆಟ್ರೋಲ್ ಬಂಕ್ಗೂ ವ್ಯಾಪಿಸಿದೆ.
ಮಾಹಿತಿ ದೊರೆತ ತಕ್ಷಣ ಸಿಪ್ಕಾಟ್ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಕರ್ನಾಟಕ ಹಾಗೂ ತಮಿಳುನಾಡಿನ ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು.
ಘಟನೆಯಲ್ಲಿ ಬಂಕ್ ಸಿಬ್ಬಂದಿ ಕುಮಾರ್ ಅವರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರಿನ ಚಾಲಕ ಸಂಜಯ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.



