ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಭೂಮಂಡಲ ಬರುಬರುತ್ತಾ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ಪ್ರಪಂಚದಾದ್ಯಂತ ಹವಾಮಾನ ತಜ್ಞರು ತೀವ್ರವಾಗುತ್ತಿರುವ ಸೂಪರ್ ಡೂಪರ್ ಎಲ್ ನಿನೋ ಬಗ್ಗೆ ಎಚ್ಚರ ನೀಡುತ್ತಿದ್ದಾರೆ. ಇದು ಅಪಾಯಮಟ್ಟಕ್ಕೆ ತಲುಪಿದೆ! 1950ರ ನಂತರ ಕಂಡುಬಂದ ಅತ್ಯಂತ ಪ್ರಬಲವಾದ ವಿದ್ಯಮಾನಗಳಲ್ಲಿ ಒಂದಾಗಿರಬಹುದು ಎಂದು ವಿಶ್ವಸಂಸ್ಥೆ ಕರೆ ನೀಡಿದೆ.
ವಿಶ್ವಸಂಸ್ಥೆಯ ಹವಾಮಾನ ಮತ್ತು ವಾತಾವರಣ ಸಂಸ್ಥೆಯಾದ ವಿಶ್ವ ಹವಾಮಾನ ಸಂಸ್ಥೆ, ಎಲ್ ನಿನೋ ಮಾನವ-ನಿರ್ಮಿತ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಇನ್ನಷ್ಟು ಹೆಚ್ಚಿಸಲಿದೆ. ಪೆಸಿಫಿಕ್ ಸಾಗರವು ತನ್ನಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಶಾಖವನ್ನು ಹೊರಹಾಕುವುದರಿಂದ, ಭೂಮಿಯ ಬಹುಭಾಗವು ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನವನ್ನು ಅನುಭವಿಸಲಿದೆ ಎಂದಿದೆ. ಅಲ್ಲದೆ, ಎಲ್ ನಿನೋ ಫೆಬ್ರವರಿ 2027ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಹವಾಮಾನ ತಜ್ಞ ರಯಾನ್ ಇಡೀ ಗ್ರಹದ ಹವಾಮಾನ ನಕ್ಷೆಯನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಭೂಮಿಕ ಬಹುತೇಕ ಭಾಗ ಕೆಂಪು ಬಣ್ಣದಲ್ಲಿದೆ. ಇದರರ್ಥ ಯಾವೆಲ್ಲಾ ಭಾಗಗಳಲ್ಲಿ ಕೆಂಪಗಿದೆಯೋ ಆ ಭಾಗಗಳಲ್ಲಿ ಬಿಸಿಲು ಹೆಚ್ಚಾಗಲಿದೆ ಎಂದರ್ಥ. ಅಮೆರಿಕ ಹೊರತುಪಡಿಸಿ ಎಲ್ಲ ಕಡೆ ತಾಪಮಾನ ಹೆಚ್ಚಳವಾಗಲಿದೆ. ಚಳಿಗಾಲದಲ್ಲಿ ಬಿಸಿಲು ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ ಎಲ್ ನಿನೋದಿಂದಾಗಿ ಜಾಗತಿಕ ತಾಪಮಾನ ಹೆಚ್ಚಳದ ಜೊತೆಗೆ ದೊಡ್ಡ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಬರ ಕೆಲವು ಪ್ರದೇಶಗಳಲ್ಲಿ ಅತಿಯಾದ ಮಳೆ. ಒಟ್ಟಾರೆ ಎಲ್ಲವೂ ಎಕ್ಸ್ಟ್ರೀಮ್ ಆಗಲಿದೆ. ಮೊದಲು ಎಲ್ನೀನೋ ಇತ್ತು, ನಂತರ ಎಲ್ ನೀನೋ ಸೂಪರ್ ಇತ್ತು. ಇದೀಗ ಈ ಹಂತಗಳನ್ನು ದಾಟಿ ಸೂಪರ್ ಡೂಪರ್ ಎಲ್ ನೀನೋ ಹಂತ ಪ್ರವೇಶಿಸಿರುವುದು ಕಳವಳಕಾರಿಯಾಗಿದೆ.
ಎಲ್ ನಿನೊ ಎಂಬುದು ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುವ ಒಂದು ನೈಸರ್ಗಿಕ ಹವಾಮಾನ ವಿದ್ಯಮಾನವಾಗಿದೆ. ಇದು ಜಗತ್ತಿನಾದ್ಯಂತ ಹವಾಮಾನ ಮತ್ತು ಮಳೆಯ ಮಾದರಿಯಲ್ಲಿ ದೊಡ್ಡ ಬದಲಾವಣೆಗಳನ್ನು ಉಂಟುಮಾಡುತ್ತದೆ. ಮಧ್ಯ ಮತ್ತು ಪೂರ್ವ ಉಷ್ಣವಲಯದ ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ನೀರಿನ ತಾಪಮಾನ ಹಿಂದೆಂದಿಗಿಂತಲೂ ಹೆಚ್ಚಾಗುತ್ತವೆ. ಇನ್ನು ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಮಾರುತಗಳು ಈ ಸಮಯದಲ್ಲಿ ದುರ್ಬಲಗೊಳುತ್ತವೆ. ಇದರಿಂದ ಬೆಚ್ಚಗಿನ ನೀರು ದಕ್ಷಿಣ ಕರಾವಳಿ ಹಾಗೂ ಮಧ್ಯ ಫೆಸಿಫಿಕ್ ಕಡೆ ಹೋಗುತ್ತವೆ. ಸಾಮಾನ್ಯವಾಗಿ ಪ್ರತೀ ಎರಡರಿಂದ ಏಳು ವರ್ಷಕ್ಕೊಮ್ಮೆ ಎಲ್ ನೀನೊ ಕಾಣಿಸಿಕೊಳ್ಳುತ್ತದೆ.



