ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಹಾಗೂ ಜಾಗತಿಕ ತಂತ್ರಜ್ಞಾನ ವಲಯಕ್ಕೆ ಅಮೆರಿಕದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಭಾರೀ ಆಘಾತ ನೀಡಿದೆ. ವಿದೇಶಿ ಉದ್ಯೋಗಿಗಳಿಗೆ ಕಾಯಂ ವಾಸದ ಹಕ್ಕು ಅಂದರೆ ‘ಗ್ರೀನ್ ಕಾರ್ಡ್’ ಒದಗಿಸುವ ಪ್ರಮುಖ ಪ್ರಕ್ರಿಯೆಯಾದ ‘ಪರ್ಮ್’ ನಿಂದ ಇನ್ಫೋಸಿಸ್, ವಿಪ್ರೋ, ಟಾಟಾ (TCS), ಕಾಗ್ನಿಜೆಂಟ್, ಎಚ್‌ಸಿಎಲ್ ಮತ್ತು ಕ್ಯಾಪ್‌ಜೆಮಿನಿ ಸೇರಿದಂತೆ ವಿಶ್ವದ ಅತಿ ದೊಡ್ಡ ಐಟಿ ಔಟ್‌ಸೋರ್ಸಿಂಗ್ ಕಂಪನಿಗಳನ್ನು ಅಮೆರಿಕ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
H-1B ವೀಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಹಲವು ಸಕ್ರಿಯ ಫೆಡರಲ್ ತನಿಖೆಗಳ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕೀತ್ ಸೋಂಡರ್ಲಿಂಗ್ ತಿಸಿದ್ದಾರೆ. ಇದೇ ವೇಳೆ ಅಮೆರಿಕದ ದೊಡ್ಡ ಕಂಪನಿಗಳಾದ ಮೈಕ್ರೋಸಾಫ್ಟ್ ಮತ್ತು ಅಡೋಬ್ಸಂಸ್ಥೆಗಳನ್ನೂ ಈ ಕಾರ್ಯಕ್ರಮದಿಂದ ಅಮಾನತು ಮಾಡಲಾಗಿದೆ.
ಮೈಕ್ರೋಸಾಫ್ಟ್ ವಿರುದ್ಧ ಗುಡುಗಿದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್:
ವೀಸಾ ವಂಚನೆ ತಡೆ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಟೆಕ್ ದೈತ್ಯ ಕಂಪನಿಗಳ ಹುನ್ನಾರವನ್ನು ಬಹಿರಂಗಪಡಿಸಿದ್ದಾರೆ. H-1B ವೀಸಾ ಕಾರ್ಯಕ್ರಮವನ್ನು ತರಲಾಗಿದ್ದೇ ಅಮೆರಿಕದಲ್ಲಿ ಸಿಗದೇ ಇರುವ ಅತ್ಯಂತ ಪ್ರತಿಭಾವಂತ ವಿದೇಶಿ ನೌಕರರನ್ನು ಕರೆತರಲು. ಆದರೆ ಇಂದು ಈ ವ್ಯವಸ್ಥೆ ವಂಚನೆಯ ಕೂಪವಾಗಿದೆ ಎಂದು ಕಿಡಿಕಾರಿದ್ದಾರೆ.
ವಿಶೇಷವಾಗಿ ಮೈಕ್ರೋಸಾಫ್ಟ್ ಕಂಪನಿಯನ್ನು ಗುರಿಯಾಗಿಸಿಕೊಂಡ ವ್ಯಾನ್ಸ್, ಮೈಕ್ರೋಸಾಫ್ಟ್ ಕಳೆದ ವರ್ಷ 6,000 ಅಮೆರಿಕನ್ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿತ್ತು. ಆದರೆ ಅದೇ ಸಮಯದಲ್ಲಿ ಕಂಪನಿಯು 6,300 H-1B ವೀಸಾ ಹಾಗೂ ಸುಮಾರು 3,000 ಗ್ರೀನ್ ಕಾರ್ಡ್‌ಗಳ ಲಾಭ ಪಡೆದುಕೊಂಡಿದೆ. ಅಂದರೆ, ಕಂಪನಿಯು ವಜಾಗೊಳಿಸಿದ ಪ್ರತಿ ಒಬ್ಬ ಅಮೆರಿಕನ್ ಕಾರ್ಮಿಕನ ಜಾಗಕ್ಕೆ ಒಂದೂವರೆ ಪಟ್ಟು ವಿದೇಶಿ ನೌಕರರನ್ನು ಸೇರಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೊಸ ಅರ್ಜಿಗಳ ಸ್ವೀಕಾರ ಪೂರ್ಣ ಬಂದ್
ಅಮೆರಿಕದ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಮಾತನಾಡಿ, ಅಮೆರಿಕನ್ ಕಾರ್ಮಿಕರ ವಿರುದ್ಧ ನಡೆಯುವ ಇಂತಹ ತಾರತಮ್ಯವನ್ನು ಟ್ರಂಪ್ ಆಡಳಿತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ ಎಂದಿದ್ದಾರೆ. ಇನ್ನು ಮುಂದೆ ಅಮಾನತುಗೊಂಡಿರುವ ಈ ಕಂಪನಿಗಳಿಗೆ ಸಂಬಂಧಿಸಿದ ಯಾವುದೇ ಹೊಸ ಪರ್ಮ್ (PERM) ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಬಾಕಿ ಇರುವ ಅರ್ಜಿಗಳನ್ನೂ ಪ್ರಕ್ರಿಯೆಗೊಳಿಸುವುದಿಲ್ಲ ಎಂದು ಕಾರ್ಮಿಕ ಇಲಾಖೆ ಸ್ಪಷ್ಟಪಡಿಸಿದೆ. 2009ರಿಂದ ಇವೇ ಕಂಪನಿಗಳು ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗೆ ಬೇಡಿಕೆ ಇಟ್ಟಿದ್ದು, ಲಕ್ಷಾಂತರ ಅಮೆರಿಕನ್ನರ ಉದ್ಯೋಗಗಳನ್ನು ಕಿತ್ತುಕೊಂಡಿವೆ ಎಂದು ಇಲಾಖೆ ಗಂಭೀರ ಆರೋಪ ಮಾಡಿದೆ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಓಪಿಟಿ ಗೂ ಭಾರಿ ಶುಲ್ಕ
ಮತ್ತೊಂದು ಬಿಗ್ ಅಪ್‌ಡೇಟ್‌ನಲ್ಲಿ, ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ವಿದೇಶಿ ವಿದ್ಯಾರ್ಥಿಗಳ ಉದ್ಯೋಗ ತರಬೇತಿ ಕಾರ್ಯಕ್ರಮವಾದ ಓಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಗೆ ಭಾರಿ ಮೊತ್ತದ ಶುಲ್ಕ ವಿಧಿಸಲು ಪ್ರಸ್ತಾಪಿಸಿದೆ.



