ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸರ್ಕಾರವು ಸರ್ಕಾರಿ ನೌಕರರ ಬಡ್ತಿ ವಿಚಾರದಲ್ಲಿ ಮಹತ್ವದ ನಿಯಮ ಜಾರಿಗೆ ತಂದಿದೆ. ನೌಕರರು ತಮ್ಮ ಆಸ್ತಿ ಮತ್ತು ಹಣಕಾಸಿನ ವಿವರಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಿದರೆ ಮಾತ್ರ ಬಡ್ತಿಗೆ ಪರಿಗಣಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ಸಾಯಿಕುಮಾರ್ ಆದೇಶ ಹೊರಡಿಸಿದ್ದು, ಈ ತಿಂಗಳ 31ರೊಳಗೆ ಎಲ್ಲ ಸಂಬಂಧಿತ ನೌಕರರು ತಮ್ಮ ವಿವರಗಳನ್ನು ಆನ್ಲೈನ್ನಲ್ಲಿ ದಾಖಲಿಸುವಂತೆ ಸೂಚಿಸಿದ್ದಾರೆ.
ಆಸ್ತಿ, ಉಳಿತಾಯದಿಂದ ಸಾಲದವರೆಗೂ ಮಾಹಿತಿ ಕಡ್ಡಾಯ
ಸರ್ಕಾರದ ಆದೇಶದ ಪ್ರಕಾರ, ನೌಕರರು ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿ, ಉಳಿತಾಯ ಹಾಗೂ ಸಾಲಗಳ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು. ಇದಕ್ಕಾಗಿ ಸರ್ಕಾರದ ಸಮಗ್ರ ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ (Integrated Finance and Human Resource Management System – IFHRMS) ವೆಬ್ಸೈಟ್ ಬಳಸಬೇಕಾಗಿದೆ. ಹಣಕಾಸಿನ ವಿವರಗಳನ್ನು ಒಂದೇ ವ್ಯವಸ್ಥೆಯಲ್ಲಿ ದಾಖಲಿಸುವ ಮೂಲಕ ನೌಕರರ ಆಸ್ತಿ ಮತ್ತು ಹೊಣೆಗಾರಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವುದು ಈ ಕ್ರಮದ ಉದ್ದೇಶವಾಗಿದೆ.
ಇದನ್ನೂ ಓದಿ:
ಬೇರೆಯವರ ಹೆಸರಿನಲ್ಲಿರುವ ಆಸ್ತಿಯನ್ನೂ ಮುಚ್ಚಿಡುವಂತಿಲ್ಲ
ಈ ಆದೇಶದ ಪ್ರಮುಖ ಅಂಶವೆಂದರೆ, ನೌಕರರು ತಮ್ಮ ಹಣದಿಂದ ಬೇರೆಯವರ ಹೆಸರಿನಲ್ಲಿ ಖರೀದಿಸಿರುವ ಆಸ್ತಿಗಳ ವಿವರಗಳನ್ನೂ ಘೋಷಿಸಬೇಕು. ಅಂತಹ ಆಸ್ತಿಯನ್ನು ಯಾರ ಹೆಸರಿನಲ್ಲಿ ಖರೀದಿಸಲಾಗಿದೆ ಮತ್ತು ಆ ವ್ಯಕ್ತಿಗೂ ನೌಕರನಿಗೂ ಇರುವ ಸಂಬಂಧವೇನು ಎಂಬ ಮಾಹಿತಿಯನ್ನೂ ದಾಖಲಿಸಬೇಕಾಗುತ್ತದೆ. ಅಂದರೆ, ಆಸ್ತಿ ನೇರವಾಗಿ ನೌಕರನ ಹೆಸರಿನಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನು ಘೋಷಣೆಯಿಂದ ಹೊರಗಿಡಲು ಅವಕಾಶವಿರುವುದಿಲ್ಲ.
ವಿವರ ಸಲ್ಲಿಸದಿದ್ದರೆ ಬಡ್ತಿ ಪಟ್ಟಿಯಿಂದ ಹೊರಗೆ
ನಿಗದಿತ ದಿನಾಂಕದೊಳಗೆ ಆಸ್ತಿ ವಿವರಗಳನ್ನು ಸಲ್ಲಿಸಿದ ನೌಕರರನ್ನಷ್ಟೇ ಬಡ್ತಿ ಪಟ್ಟಿಯಲ್ಲಿ ಸೇರಿಸಲು ಪರಿಗಣಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸೂಚನೆಯನ್ನು ಪಾಲಿಸದಿದ್ದರೆ ಅದನ್ನು ಸರ್ಕಾರಿ ನೌಕರರ ನಡವಳಿಕೆ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ.



