ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ವೀಕೆಂಡ್ ಮೋಜು-ಮಸ್ತಿಗೆ ಬೆಂಗಳೂರು ನಗರ ಪೊಲೀಸರು ಭರ್ಜರಿ ಬ್ರೇಕ್ ಹಾಕಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ತಡರಾತ್ರಿಯವರೆಗೂ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ವಿರುದ್ಧ ಗೃಹ ಸಚಿವರ ಸೂಚನೆಯ ಮೇರೆಗೆ ಇಡೀ ನಗರದಾದ್ಯಂತ ತಡರಾತ್ರಿ ಪೊಲೀಸರು ಹಠಾತ್ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.
ಖುದ್ದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರೇ ಮೈದಾನಕ್ಕಿಳಿದು ಕೋರಮಂಗಲ ವಲಯದಲ್ಲಿ ಮಧ್ಯರಾತ್ರಿಯವರೆಗೂ ಗಸ್ತು ತಿರುಗಿದ್ದು, ನಿಯಮ ಉಲ್ಲಂಘಿಸುವ ಮಾಲೀಕರಲ್ಲಿ ತಲ್ಲಣ ಸೃಷ್ಟಿಸಿದೆ.
ಲೇಡಿಸ್ ಪಬ್ಗಳ ಮೇಲೆ ದಾಳಿ
ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ, ಸಿಸಿಬಿ ಹಾಗೂ ಸಂಚಾರ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು 15 ಮಂದಿ ಡಿಸಿಪಿಗಳು ಈ ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬ್ರಿಗೇಡ್ ರಸ್ತೆಯ ಜನಪ್ರಿಯ ‘ಬ್ರಿಗೇಡ್ ಗಾರ್ಡನ್’ ಹಾಗೂ ‘ಪೇಜ್ 3’ ಲೇಡಿಸ್ ಪಬ್ ಸೇರಿದಂತೆ ಕೋರಮಂಗಲ, ಗಾಂಧಿನಗರದ ಪಬ್ಗಳು ಹಾಗೂ ಪ್ರತಿಷ್ಠಿತ ಲಲಿತ್ ಅಶೋಕ್ ಹೋಟೆಲ್ ಮೇಲೆಯೂ ಪೊಲೀಸರು ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದರು. ವಿಶೇಷವಾಗಿ, ಈ ಪಬ್ಗಳಲ್ಲಿ ಕಾನೂನು ಬಾಹಿರವಾಗಿ ಅಪ್ರಾಪ್ತ ವಯಸ್ಸಿನ ಹುಡುಗ-ಹುಡುಗಿಯರಿಗೆ ಮದ್ಯ ಸರಬರಾಜು ಮಾಡಲಾಗುತ್ತಿದೆಯೇ ಹಾಗೂ ಅಪ್ರಾಪ್ತರನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಾಯಿತು.
ರೌಡಿ ಸಂಸ್ಕೃತಿಗೆ ಮುಕ್ತಿ, ರಸ್ತೆ ರಸ್ತೆಗಳಲ್ಲೂ ನಾಕಾಬಂಧಿ
ಕೇವಲ ಪಬ್ಗಳ ತಪಾಸಣೆ ಮಾತ್ರವಲ್ಲದೆ, ನಗರದ ಪ್ರಮುಖ ಆಯಕಟ್ಟಿನ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ನಾಕಾಬಂಧಿ ಜಾರಿಗೊಳಿಸಲಾಗಿತ್ತು. ವೀಕೆಂಡ್ ಮೋಜಿನ ಹೆಸರಿನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚಲು ತೀವ್ರ ತಪಾಸಣೆ ನಡೆಸಲಾಯಿತು. ನಗರದಲ್ಲಿ ಆಂಟಿ ರೌಡಿ ಸ್ಕ್ವಾಡ್ ಸಕ್ರಿಯವಾಗಿದ್ದು, ರೌಡಿ ಸಂಸ್ಕೃತಿಯನ್ನು ಬುಡಸಹಿತ ಮಟ್ಟ ಹಾಕಲಾಗುವುದು. ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ:
ರಾತ್ರಿ 1 ಗಂಟೆಗೆ ಡೆಡ್ಲೈನ್
ಈ ದಾಳಿಯ ಬಳಿಕ ಕಟ್ಟುನಿಟ್ಟಿನ ಸಂದೇಶ ರವಾನಿಸಿರುವ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, “ಸಾಧಾರಣವಾಗಿ ರಾತ್ರಿ 1 ಗಂಟೆಗೆ ನಗರದ ಎಲ್ಲಾ ಪಬ್ಗಳು ಕಡ್ಡಾಯವಾಗಿ ಬಂದ್ ಆಗಬೇಕು. ನಿಗದಿಪಡಿಸಿದ ಸಮಯದ ಒಳಗೆ ವ್ಯವಹಾರ ಸ್ಥಗಿತಗೊಳಿಸದಿದ್ದರೆ ಪರವಾನಗಿ ರದ್ದತಿಯಂತಹ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಸಾರ್ವಜನಿಕರಿಂದ ದೂರು ಬರದಿದ್ದರೂ ಸಹ, ನಿಯಮ ಉಲ್ಲಂಘನೆ ಕಂಡುಬಂದರೆ ಪೊಲೀಸರೇ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಯಾವುದೇ ಅಕ್ರಮದ ಮಾಹಿತಿ ಸಿಕ್ಕರೂ ತಕ್ಷಣ ಆ್ಯಕ್ಷನ್ ತೆಗೆದುಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.



