ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ CEC ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಸಚಿವ ಪಿಯೂಷ್ ಗೋಯಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಮಾತನಾಡುವ ಕಾಂಗ್ರೆಸ್, ಹಿಂದೆ ತಾನೇ ಒಬ್ಬ ಮುಖ್ಯ ಚುನಾವಣಾ ಆಯುಕ್ತರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿತ್ತು, ಮತ್ತೊಬ್ಬರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿತ್ತು ಹಾಗೂ ಇಬ್ಬರು ಆಯುಕ್ತರನ್ನು ರಾಜ್ಯಪಾಲರನ್ನಾಗಿ ನೇಮಿಸಿತ್ತು ಎನ್ನುವುದನ್ನು ಮರೆತಿದೆಯೇ? ಎಂದು ಗೋಯಲ್ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಹಳೆಯ ಇತಿಹಾಸದ ಉದಾಹರಣೆಗಳನ್ನು ನೀಡಿ ಟೀಕಿಸಿದರು.
ಟಿ.ಎನ್. ಶೇಷನ್, ಎಂ.ಎಸ್. ಗಿಲ್ ಉದಾಹರಣೆ ನೀಡಿದ ಗೋಯಲ್
ಕಾಂಗ್ರೆಸ್ ಪಕ್ಷದ ಹಿಂದಿನ ನಡೆಗಳನ್ನು ಪ್ರಸ್ತಾಪಿಸಿದ ಸಚಿವರು, ರಾಜಕೀಯ ಲಾಭಕ್ಕಾಗಿ ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡ ಇತಿಹಾಸ ಕಾಂಗ್ರೆಸ್ಸಿಗಿದೆ. ದೇಶದ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ (1990-1996) ಸೇವೆ ಸಲ್ಲಿಸಿದ್ದ ಅಧಿಕಾರಿ ಟಿ.ಎನ್. ಶೇಷನ್ ಅವರನ್ನು 1999 ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ವಿರುದ್ಧ ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಹಾಗೆಯೇ, 1996 ರಿಂದ ಸಿಇಸಿ ಆಗಿದ್ದ ಎಂ.ಎಸ್. ಗಿಲ್ ಅವರು ಅಧಿಕಾರದಲ್ಲಿದ್ದಾಗಲೇ ಅವರ ಚಾಚೂತಪ್ಪದ ತೇಜಸ್ಸಿಗೆ ಪ್ರತಿಯಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ಆ ಬಳಿಕ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿ ಕೇಂದ್ರ ಸಚಿವರೂ ಆದರು. ಇದು ಚುನಾವಣಾ ಆಯೋಗದ ಘನತೆಯನ್ನು ದುರುಪಯೋಗಪಡಿಸಿಕೊಂಡ ಕೃತ್ಯವಲ್ಲವೇ? ಎಂದು ಗೋಯಲ್ ಪ್ರಶ್ನಿಸಿದರು.
ನವೀನ್ ಚಾವ್ಲಾ, ಆರ್.ಕೆ. ದ್ವಿವೇದಿ ನೇಮಕಾತಿಯ ಟೀಕೆ
ಕಾಂಗ್ರೆಸ್ ಅವಧಿಯ ಮತ್ತಷ್ಟು ನೇಮಕಾತಿಗಳನ್ನು ಪ್ರಶ್ನಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಆರ್.ಕೆ. ದ್ವಿವೇದಿ ಅವರು ನಿವೃತ್ತರಾದ ಕೇವಲ ಎರಡೇ ತಿಂಗಳಲ್ಲಿ ಅವರನ್ನು ಗುಜರಾತ್ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಇನ್ನು ನವೀನ್ ಚಾವ್ಲಾ ಅವರನ್ನು ಚುನಾವಣಾ ಆಯೋಗದಿಂದ ತೆಗೆದುಹಾಕಬೇಕೆಂದು ಅಂದಿನ ಮುಖ್ಯ ಆಯುಕ್ತ ಗೋಪಾಲಸ್ವಾಮಿ ಶಿಫಾರಸು ಮಾಡಿದ್ದರೂ, ಸೋನಿಯಾ ಗಾಂಧಿ ಅವರು ಸರ್ಕಾರದ ಭಾಗವಾಗಿಲ್ಲದಿದ್ದಾಗಲೂ ಹಠ ಹಿಡಿದು ಅವರನ್ನು 16ನೇ ಸಿಇಸಿ ಸ್ಥಾನಕ್ಕೆ ತಂದು ಕುಳ್ಳಿರಿಸಿದರು. ಕೇರಳದ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ರತ್ನ ಯು. ಕೇಳ್ಕರ್ ಅವರು ಚುನಾವಣೆ ಮುಗಿದ ತಕ್ಷಣವೇ ಅಲ್ಲಿನ ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ನೇಮಕಗೊಂಡರು. ಇಷ್ಟೆಲ್ಲಾ ಇತಿಹಾಸವಿಟ್ಟುಕೊಂಡು ಕಾಂಗ್ರೆಸ್ ಇಂದು ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಹರಿಹಾಯ್ದರು.
ಇದನ್ನೂ ಓದಿ:
ಸುಪ್ರೀಂ ಕೋರ್ಟ್ನಲ್ಲಿ ರಾಹುಲ್ ಅರ್ಜಿಗೆ ಹಿನ್ನಡೆ
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಇಡೀ ‘ಇಂಡಿ ಒಕ್ಕೂಟ’ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಸುಪ್ರೀಂ ಕೋರ್ಟ್ಗೆ ಮೆರವಣಿಗೆ ಹೊರಟ ಬೆನ್ನಲ್ಲೇ ಈ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ. ಇದೇ ವೇಳೆ, ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಒಕ್ಕೂಟದ ಇತರ 9 ನಾಯಕರು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ಬರೋಬ್ಬರಿ 14 ತಾಂತ್ರಿಕ ಲೋಪದೋಷಗಳನ್ನು ಪತ್ತೆಹಚ್ಚಿ ಗುರುತಿಸಿದೆ. ಇದರಿಂದಾಗಿ ವಿಪಕ್ಷಗಳ ನ್ಯಾಯಾಂಗ ಹೋರಾಟಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾದಂತಾಗಿದ್ದು, ರಾಜಧಾನಿಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.



