ಹೊಸದಿಗಂತ ವರದಿ ರಾಮನಗರ:
ಟೀ ಅಂಗಡಿಯಲ್ಲಿ ಒಬ್ಬರೇ ಇದ್ದ ಮಹಿಳೆಯನ್ನು ಗುರಿಯಾಗಿಸಿಕೊಂಡ ಇಬ್ಬರು ಸರಗಳ್ಳರು, ಅವರ ಕೊರಳಿನಲ್ಲಿದ್ದ ತಾಳಿ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಮನಗರ ತಾಲ್ಲೂಕಿನ ಬಸವನಪುರ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿಯಲ್ಲಿ ನಡೆದಿದೆ. ಸರ ಕಸಿಯುವುದನ್ನು ತಡೆಯಲು ಮಹಿಳೆ ಪ್ರತಿರೋಧ ತೋರಿದಾಗ ಕಳ್ಳರು ಹಲ್ಲೆ ನಡೆಸಿದ್ದು, ಅವರ ತಲೆಗೆ ಗಾಯವಾಗಿದೆ.
ಬಸವನಪುರ ಗ್ರಾಮದ ಜಯಲಕ್ಷ್ಮಮ್ಮ ಗಾಯಗೊಂಡ ಮಹಿಳೆ. ಅವರಿಗೆ ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಪಲ್ಸರ್ ಬೈಕ್ನಲ್ಲಿ ಟೀ ಅಂಗಡಿಗೆ ಬಂದಿದ್ದ ಇಬ್ಬರು ಆರೋಪಿಗಳು ಮೊದಲು ಟೀ ಕುಡಿದು ಕೆಲಕಾಲ ಅಲ್ಲಿಯೇ ಇದ್ದರು. ಬಳಿಕ ಅಂಗಡಿಯಲ್ಲಿದ್ದ ಇತರ ಗ್ರಾಹಕರು ತೆರಳಿದ ನಂತರ ಜಯಲಕ್ಷ್ಮಮ್ಮ ಒಬ್ಬರೇ ಇರುವುದನ್ನು ಗಮನಿಸಿದ್ದಾರೆ. ಸಂಜೆ ಸುಮಾರು 4 ಗಂಟೆಯ ವೇಳೆಗೆ ಮುಖಕ್ಕೆ ಮುಸುಕು ಹಾಕಿಕೊಂಡು ಅವರ ಕೊರಳಿನಲ್ಲಿದ್ದ ಸುಮಾರು 70 ಗ್ರಾಂ ತೂಕದ ಚಿನ್ನದ ತಾಳಿ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ.
ಇದನ್ನೂ ಓದಿ:
ಈ ವೇಳೆ ಜಯಲಕ್ಷ್ಮಮ್ಮ ತಾಳಿ ಸಮೇತ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಕಳ್ಳರ ಪ್ರಯತ್ನಕ್ಕೆ ಪ್ರತಿರೋಧ ತೋರಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಮಹಿಳೆಯನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸರ ಎರಡು ತುಂಡಾಗಿದೆ. ಜಯಲಕ್ಷ್ಮಮ್ಮ ನೆಲಕ್ಕೆ ಬಿದ್ದು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆದರೆ, ಆರೋಪಿಗಳು ತಮ್ಮ ಕೈಗೆ ಸಿಕ್ಕ ಸುಮಾರು 60 ಗ್ರಾಂ ಚಿನ್ನದ ಸರದ ತುಂಡನ್ನು ತೆಗೆದುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹಾಗೂ ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.



