ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವರು ಮತ್ತು ಗುರುಗಳ ಮೇಲಿನ ಪ್ರೀತಿಯೇ ನಿಜವಾದ ಭಕ್ತಿ. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಮನಸ್ಸು ಸಹಜವಾಗಿ ಸ್ಥಿರವಾಗುತ್ತದೆ. ಭಕ್ತಿಯ ಮೂಲಕ ಜೀವನದ ಸಂಕಷ್ಟಗಳನ್ನು ಎದುರಿಸುವುದರ ಜೊತೆಗೆ ಮುಕ್ತಿಯ ಮಾರ್ಗವನ್ನೂ ಕಂಡುಕೊಳ್ಳಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆದ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನದ ಕುರಿತು ಶ್ರೀಗಳು ಪ್ರವಚನ ನೀಡಿದರು.

ಪುರಾಣ ಗ್ರಂಥಗಳೂ ದೇವರ ಅವತಾರದಂತೆ
ಬ್ರಹ್ಮಾಂಡ ಪುರಾಣದ ಭಾಗವಾಗಿರುವ ಲಲಿತೋಪಾಖ್ಯಾನವು ಮಹತ್ವದ ಆಧ್ಯಾತ್ಮಿಕ ವಿಚಾರಗಳನ್ನು ಒಳಗೊಂಡಿದೆ. ಪುರಾಣ ಗ್ರಂಥಗಳು ದೇವರ ಅವತಾರಗಳಿಗೆ ಸಮಾನವಾದ ಮಹತ್ವ ಹೊಂದಿದ್ದು, ಅವು ಮನುಷ್ಯರ ಉದ್ಧಾರಕ್ಕೆ ದಾರಿಯಾಗುತ್ತವೆ. ದೇವರ ಅವತಾರಗಳು ಹಿಂದೆ ಮಾಡಿದ ಕಾರ್ಯವನ್ನೇ ಇಂದು ಗ್ರಂಥಗಳು ಜ್ಞಾನ ಮತ್ತು ಅರಿವಿನ ಮೂಲಕ ಮಾಡುತ್ತಿವೆ ಎಂದು ಶ್ರೀಗಳು ತಿಳಿಸಿದರು.

ಪ್ರಕೃತಿ ಮತ್ತು ಪುರುಷನ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಆಧ್ಯಾತ್ಮಿಕ ಪ್ರಗತಿಗೆ ಮುಖ್ಯ. ಪ್ರಕೃತಿಯು ಸೃಷ್ಟಿಯ ಭೌತಿಕ ರೂಪವಾದರೆ, ಪುರುಷನು ಅದರೊಳಗಿನ ಚೇತನವಾಗಿದೆ. ಇವೆರಡರ ನಿಜಸ್ವರೂಪವನ್ನು ಅರಿತುಕೊಳ್ಳುವುದು ಮುಕ್ತಿಯ ಮಾರ್ಗಕ್ಕೆ ನೆರವಾಗುತ್ತದೆ ಎಂದು ಅವರು ವಿವರಿಸಿದರು. ಲಲಿತಾ ತ್ರಿಪುರಸುಂದರಿಯ ಧ್ಯಾನವು ವ್ಯಕ್ತಿಯ ಬದುಕಿನಲ್ಲಿ ಪರಿವರ್ತನೆ ತರಬಲ್ಲದು ಎಂದೂ ಹೇಳಿದರು.

ಕಷ್ಟಗಳ ನಡುವೆ ಭಕ್ತಿಯೇ ದಾರಿ
ಜೀವನದಲ್ಲಿ ಕಷ್ಟಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಒಂದಾಗಿ ಬರುತ್ತಲೇ ಇರುತ್ತವೆ. ದೇವರಲ್ಲಿ ಭಕ್ತಿ ಹೊಂದಿದಾಗ ಸಂಸಾರದ ಸಂಕಷ್ಟಗಳನ್ನು ದಾಟಲು ಸಾಧ್ಯ. ಬದುಕಿನಲ್ಲಿ ಭಾವನೆ ಮತ್ತು ಬುದ್ಧಿವಂತಿಕೆ ಎರಡಕ್ಕೂ ಮಹತ್ವ ನೀಡಬೇಕು. ಕೇವಲ ಹೊಟ್ಟೆಪಾಡಿಗಾಗಿ ಬದುಕುವುದಕ್ಕಿಂತ ಅರಿವು ಮತ್ತು ಜ್ಞಾನದಿಂದ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ರಾಘವೇಶ್ವರ ಶ್ರೀಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇಮಾಮಿ ಸಂಸ್ಥೆಯ ಸಂಸ್ಥಾಪಕ ರಾಧೇಶ್ಯಾಮ್ ಗೋಯೆಂಕಾ, ಉದ್ಯಮಿ ಆರ್.ಕೆ ಅಗರ್’ವಾಲ್, ಉದ್ಯಮಿ ಜೆ.ಕೆ. ಜವೇರ್ ಶ್ರೀಗಳ ಆಶೀರ್ವಾದ ಪಡೆದರು. ಶ್ರೀದುರ್ಗಾಸೂಕ್ತ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ, ಭಜನಾ ಮಂಡಳಿಗಳಿಂದ ಭಜನೆ, ದುರ್ಗಾ ದೀಪನಮಸ್ಕಾರ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು. ಹಿರಿಯ ನ್ಯಾಯವಾದಿ ಗಣಪತಿ ಹೆಗಡೆ ದುವಾ, ಮಂಜುನಾಥ ರಾವ್ ಕೆ.ಎನ್, ದಿನಪ್ರಧಾನರಾಗಿ ಅರವಿಂದ ದರ್ಭೆ ದಂಪತಿ ಉಪಸ್ಥಿತರಿದ್ದರು.




