October 13, 2026
Tuesday, October 13, 2026
spot_img

ಯೋಧರಿಗಾಗಿ 1.25 ಲಕ್ಷ ಟನ್ ಅಕ್ಕಿ ಮೀಸಲು: ‘ಭಾರತ್ ರೈಸ್’ ಪೂರೈಕೆಗೆ ಕೇಂದ್ರದ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಗಡಿಗಳನ್ನು ಕಾಯುವ ಭಾರತೀಯ ಸೈನಿಕರಿಗೆ ಗುಣಮಟ್ಟದ ಆಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಭಾರತ್ ರೈಸ್’ ಎಂಬ ಮಹತ್ವದ ಯೋಜನೆ ಕೈಗೊಂಡಿದ್ದು, ಭಾರತೀಯ ಯೋಧರಿಗಾಗಿ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ.

ಸೈನಿಕರಿಗೆ ಉತ್ತಮ ಗುಣಮಟ್ಟದ ‘ಭಾರತ್ ರೈಸ್’ ಪೂರೈಸುವ ಕುರಿತು ಸೋಮವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು.

ಸೈನಿಕರ ಆಹಾರದ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿರುವ ಕೇಂದ್ರ ಆಹಾರ ಇಲಾಖೆ, ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಅಕ್ಕಿ ಪೂರೈಸಲು ಕ್ರಮ ಕೈಗೊಂಡಿದೆ. ಈ ಉದ್ದೇಶಕ್ಕಾಗಿ ನಾಫೆಡ್‌ (NAFED) ಮೂಲಕ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಅಕ್ಕಿಯ ಗುಣಮಟ್ಟವನ್ನು ಖಚಿತಪಡಿಸಿಕೊಂಡು ಸೇನೆಗೆ ಪೂರೈಸಲಾಗುತ್ತದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

ಇದನ್ನೂ ಓದಿ:

ಅಕ್ಕಿಯ ಗುಣಮಟ್ಟಕ್ಕೆ ಕಟ್ಟುನಿಟ್ಟಿನ ಮಾನದಂಡ

‘ಭಾರತ್ ರೈಸ್’ ಯೋಜನೆಯಡಿ ಪೂರೈಸುವ ಅಕ್ಕಿಯಲ್ಲಿ ಮುರಿದ ಕಾಳುಗಳ ಪ್ರಮಾಣವನ್ನು ಗರಿಷ್ಠ ಶೇ. 5ಕ್ಕೆ ಮಿತಿಗೊಳಿಸಲಾಗುತ್ತದೆ. ಇದರಿಂದ ಸೈನಿಕರಿಗೆ ನಿಗದಿತ ಗುಣಮಟ್ಟದ ಅಕ್ಕಿ ದೊರೆಯಲಿದೆ. ಆಹಾರದಲ್ಲಿ ಗುಣಮಟ್ಟ ಕಾಪಾಡುವುದು ಸೈನಿಕರ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯಕ್ಕೆ ನೆರವಾಗುವುದರ ಜೊತೆಗೆ, ಕಠಿಣ ಪರಿಸ್ಥಿತಿಗಳಲ್ಲಿಯೂ ಅವರು ತಮ್ಮ ಕರ್ತವ್ಯ ನಿರ್ವಹಿಸಲು ಅಗತ್ಯವಾದ ಬೆಂಬಲ ಒದಗಿಸಲಿದೆ.

ಸೈನಿಕರಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಆಹಾರ ಇಲಾಖೆಯು ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬದ್ಧವಾಗಿದೆ ಎಂದು ಸಚಿವರು ಹೇಳಿದರು.

ತುರ್ತು ಸಂದರ್ಭಗಳಲ್ಲೂ ಆಹಾರ ಪೂರೈಕೆಗೆ ವ್ಯವಸ್ಥೆ

ಇದೇ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ಮತ್ತು ಭಾರತೀಯ ಆಹಾರ ನಿಗಮದ (FCI) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ತುರ್ತು ಕಾರ್ಯಾಚರಣೆಗಳು ಅಥವಾ ಅನಿರೀಕ್ಷಿತ ಪರಿಸ್ಥಿತಿಗಳು ಎದುರಾದಾಗಲೂ ಸೈನಿಕರಿಗೆ ಆಹಾರ ಪೂರೈಕೆ ನಿರಂತರವಾಗಿರುವಂತೆ ನೋಡಿಕೊಳ್ಳುವುದು ಈ ಒಪ್ಪಂದದ ಉದ್ದೇಶವಾಗಿದೆ. ರಾಜನಾಥ್ ಸಿಂಗ್ ಮತ್ತು ಪ್ರಲ್ಹಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

Must Read