Tuesday, March 28, 2023

Latest Posts

ಜನಸಾಮಾನ್ಯರಿಗೆ ಹೊರೆಯಾಗದ ಸಮತೋಲನ ಬಜೆಟ್‌ : ಸಚಿವ ಮುರುಗೇಶ್ ನಿರಾಣಿ

ಹೊಸದಿಗಂತ ಕಲಬುರಗಿ ವರದಿ :

ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಯಾವುದೇ ಹೊಸ ತೆರಿಗೆಗಳನ್ನು ವಿಧಿಸದೆ, ಜನ ಸಾಮಾನ್ಯರಿಗೆ ಹೊರೆಯಾಗದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಜನಪರವಾದ ಆಯವ್ಯಯವನ್ನು ಮಂಡಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ,ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಬಣ್ಣಿಸಿದ್ದಾರೆ.

ರೈತರು, ಮಹಿಳೆಯರು, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಂದು ಸಮುದಾಯಕ್ಕೂ ಬಜೆಟ್ ನಲ್ಲಿ ಸಾಮಾಜಿಕ ನ್ಯಾಯ ಕೊಡುವ ಮೂಲಕ ಸರ್ವರನ್ನು ಸಂಪ್ರೀತಿಗೊಳಿಸುವ ಬಜೆಟ್ ಇದಾಗಿದೆ ಎಂದು ಗುಣಗಾನ ಮಾಡಿದ್ದಾರೆ.

ಇದುವರೆಗೂ ನೀಡಲಾಗುತ್ತಿರುವ ಶೂನ್ಯ ಬಡ್ಡಿ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ ಮಾಡಿರುವುದು ರಾಜ್ಯದ ಬೆನ್ನೆಲುಬಾದ ಅನ್ನದಾತರ ಲಕ್ಷಾಂತರ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆಯಡಿ 10ಸಾವಿರ ರೂ. ಸಹಾಯಧನ, 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್ ವಿಮಾ ಯೋಜನೆ, ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಹೈಟೆಕ್ ಹಾರ್ವೆಸ್ಟರ್ ಯೋಜನೆ ಜಾರಿ ಮಾಡಿರುವುದು ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ವರದಿ ಪ್ರಕಾರ ಕರ್ನಾಟಕವು 41.6 ಸಾವಿರ ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ ಮಾಡಿದ್ದು, 75,439 ಮಿಲಿಯನ್ ಡಾಲರ್ ಮೊತ್ತದ ರಫ್ತು ಮಾಡಿದೆ. ರಾಜ್ಯವು ಅತ್ಯುತಮ ಆರ್ಥಿಕ ಪ್ರಗತಿಯನ್ನು ಬಿಂಬಿಸುವ ಈ ಎರಡು ಸೂಚ್ಯಾಂಕಗಳಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈಸ್ ಆಫ್ ಡೂಯಿಂಗ್ ಬಿಸನೆಸ್ನಲ್ಲಿ ನಮ್ಮ ರಾಜ್ಯ ಟಾಪ್ ಅಚೀವರ್ ಆಗಿ ಹೊರ ಹೊಮ್ಮಿರುವುದು ರಾಜ್ಯದ ಕೈಗಾರಿಕಾ ಪ್ರಗತಿಯನ್ನು ಬಿಂಬಿಸುತ್ತದೆ ಎಂದು ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!