ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ವಂಚನೆ ಪತ್ತೆ ವ್ಯವಸ್ಥೆಯ ಅಳವಡಿಕೆಯಿಂದಾಗಿ ಪ್ರತಿದಿನ 1.35 ಕೋಟಿ ವಂಚನೆ ಕರೆಗಳಿಗೆ ತಡೆ ಬಿದ್ದಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಗ್ರಾಹಕರಿಗೆ ಮೋಸ ಮಾಡುವ ಉದ್ದೇಶದಿಂದ ವಿದೇಶಗಳಿಂದ ಹೆಚ್ಚಾಗಿ ಅನಪೇಕ್ಷಿತ ಮೊಬೈಲ್ ಕರೆಗಳು ಬರುತ್ತವೆ. ಇಂತಹ ಸ್ಪ್ಯಾಮ್‌ಗಳನ್ನು ಪತ್ತೆಹಚ್ಚಿ ತಡೆಗಟ್ಟಲಾಗುತ್ತಿದೆ. ಇಲ್ಲಿಯವರೆಗೆ ಸಾರ್ವಜನಿಕರಿಗೆ ಆಗುತ್ತಿದ್ದ ₹ 2,500 ಕೋಟಿ ನಷ್ಟವನ್ನು ತಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಟೆಲಿಕಾಂ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ‘ಸಂಚಾರ ಸಾಥಿ’ ಪೋರ್ಟಲ್ ಅನ್ನು ರೂಪಿಸಲಾಗಿದೆ. ಇದು ಮೊಬೈಲ್ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ನೆರವಾಗಿದೆ. ಅಲ್ಲದೆ, ‘ಚಕ್ಷು’ ಪೋರ್ಟಲ್ ವಂಚನೆ ಕರೆಗಳು ಮತ್ತು ಸಂದೇಶದ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದ್ದಾರೆ.
ವಂಚನೆ ಪತ್ತೆ ವ್ಯವಸ್ಥೆಯು 2.9 ಲಕ್ಷ ಮೊಬೈಲ್ ಫೋನ್‌ಗಳ ಸಂಪರ್ಕ ಮತ್ತು 18 ಲಕ್ಷ ಸಂದೇಶಗಳನ್ನು ಸ್ಥಗಿತಗೊಳಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ವಂಚನೆ ಎಸಗುವವರು ವಿದೇಶಗಳಿಂದ ಭಾರತದ ಮೊಬೈಲ್ ಕೋಡ್ ಸಂಖ್ಯೆ ಬಳಸಿಯೇ ಗ್ರಾಹಕರ ಮೊಬೈಲ್‌ಗಳಿಗೆ ಕರೆ ಮಾಡುತ್ತಾರೆ. ತಂತ್ರಾಂಶ ಅಳವಡಿಕೆಯಿಂದಾಗಿ ಇಂತಹ ಕರೆಗಳಿಗೆ ತಡೆ ಬಿದ್ದಿದೆ ಎಂದು ಹೇಳಿದ್ದಾರೆ.