ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬಕಾರಿಯಲ್ಲಿ 700 ಕೋಟಿ ಪಡೆಯೋಕೆ ಆಗುತ್ತಾ? ಒಬ್ಬ ಪ್ರಧಾನಿ ಆದವರು ಈ ರೀತಿ ಸುಳ್ಳು ಹೇಳೊದು ಆ ಸ್ಥಾನಕ್ಕೆ ಅಗೌರವ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸರ್ಕಾರ ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂ. ಪಡೆದಿದೆ ಎಂಬ ಆರೋಪ ಇದೆ ಅನ್ನೋ ಪ್ರಧಾನಿ ಮೋದಿ ಅವರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಒಬ್ಬ ಪ್ರಧಾನಿ ಆದವರು ಸುಳ್ಳು ಹೇಳೊದು ಆ ಸ್ಥಾನಕ್ಕೆ ಅಗೌರವ. ಯಾರಾದ್ರೂ ಅಬಕಾರಿಯಲ್ಲಿ 700 ಕೋಟಿ ಅಕ್ರಮ ಮಾಡಲು ಆಗುತ್ತಾ? ಒಬ್ಬ ಪ್ರಧಾನಿ ಸುಳ್ಳು ಹೇಳಬೇಕಾದ್ರೆ ಏನು ಹೇಳಬೇಕು? ಯಾಕ್ರಿ ದುಡ್ಡು ಕೊಡ್ತಾರೆ ಅವರು, ಬಿಜೆಪಿಯವರು ರಾಜಕೀಯಗೋಸ್ಕರ ಆರೋಪ ಮಾಡಿದ್ದಾರೆ, ಮದ್ಯದ ಅಂಗಡಿ ವ್ಯಾಪಾರಿಗಳು ರಾಜಕೀಯ ಕಾರಣಕ್ಕೆ ಆರೋಪ ಮಾಡಿರುತ್ತಾರೆ ಎಂದರು.
ಹಿಂದೆ ಶಾಸಕರನ್ನ ಕೊಂಡುಕೊಂಡಿದ್ರಲ್ಲಾ, ಎಷ್ಟು ಕೋಟಿ ಕೊಟ್ಟಿದ್ರು? ಎಲ್ಲಿಂದ ದುಡ್ಡು ಬಂತು ಯತ್ನಾಳ್ ಅವರು, ಸಿಎಂ ಆಗಬೇಕಾದರೆ 2 ಸಾವಿರ ಕೋಟಿಕೊಡಬೇಕು ಅಂದಿದ್ದರು. ಯಾವ ದುಡ್ಡು ಅದು? ಎಂದ ಸಿದ್ದರಾಮಯ್ಯ, ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಹಣ ಕೊಟ್ಟ ಬಗ್ಗೆ ಮಾತಾಡಿದ್ದು, ಇದು ನಾನು ಹೇಳಿದ್ದಲ್ಲಾ ಯತ್ನಾಳ ಹೇಳಿದ್ದು. ಅವರು ಕೇಂದ್ರದ ಮಾಜಿ ಮಂತ್ರಿ, ಯಡಿಯೂರಪ್ಪ 2,000 ಕೋಟಿ ರೂ. ಕೊಟ್ಟು ಸಿಎಂ ಆಗಿದ್ದು ಎಂದಿದ್ದಾರೆ. ಬೊಮ್ಮಾಯಿ ಸಿಎಂ ಆಗಲು ಹಣ ಕೊಟ್ಟರು ಎಂದಿದ್ದರು. ಎಲ್ಲಿಂದ ಬಂತು ದುಡ್ಡು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.
ಇದೇ ವೇಳೆ ಕೋವಿಡ್ ಹಗರಣ ತನಿಖೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಗರಣ ವರದಿ ಇನ್ನೂ ಕ್ಯಾಬಿನೆಟ್ ಎದುರು ಬಂದಿಲ್ಲ, ಎಗ್ಸಾಮಿನ್ ಮಾಡುತ್ತಿದ್ದಾರೆ, ಸಬ್ ಕಮಿಟಿ ವರದಿ ಬಂದ ಮೇಲೆ, ಅದರ ಬಗ್ಗೆ ಚರ್ಚೆ ಆಗಲಿದೆ ಎಂದರು.