ಭಗವದ್ಗೀತೆ ಹೆಸರಲ್ಲಿ ಹಿಂದು ಧರ್ಮದ ಅವಹೇಳನಕ್ಕೊಂದು ಪುಸ್ತಕ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಶೀರ್ಷಿಕೆಯೊಂದಿಗೆ ಗೀತೆಯ ಪಾಸಿಟಿವಿಟಿಯನ್ನು ತನ್ನ ಶೀರ್ಷಿಕೆಯಲ್ಲಿ ಬಂಡವಾಳ ಮಾಡಿಕೊಂಡು ಟೋಲ್ ಗೇಟ್, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಇತ್ತೀಚೆಗೊಂದು ಪುಸ್ತಕ ದೊಡ್ಡಮಟ್ಟದಲ್ಲಿ ಬಿಕರಿಯಾಗ್ತಿದೆ. ಕೇವಲ ಹತ್ತು ರುಪಾಯಿಗಳಿಗೆ ಮಾರಾಟವಾಗುತ್ತಿರುವ ಪುಸ್ತಕದ ಹೂರಣ ಮಾತ್ರ ಸಂಪೂರ್ಣ ಬೇರೆ. ಇದರ ಮೂಲ ಉದ್ದೇಶವೇ ನಮ್ಮ ನಂಬಿಕೆಗಳನ್ನು, ಶ್ರದ್ಧೆಯನ್ನು, ನಮ್ಮ ಪೂಜಾಪದ್ಧತಿಯನ್ನು ಸಂಪೂರ್ಣವಾಗಿ ಅಲ್ಲಗೆಳೆಯೋದು ಮತ್ತು ಅವಹೇಳನ ಮಾಡಿ, ನಿಮ್ಮಲ್ಲೊಂದು ಕೀಳರಿಮೆ ಹುಟ್ಟಿಕೊಳ್ಳುವಂತೆ ಮಾಡುವಂಥದ್ದು.

ಇದರ ಕಾರ್ಯತಂತ್ರ ಮಾತ್ರ ಬಹಳ ಗಮನಿಸಬೇಕಾದದ್ದು. ನಿಮ್ಮ ಶ್ರದ್ಧೆಯನ್ನು ಪ್ರಶ್ನಿಸೋ ಸಂಗತಿಗಳನ್ನೆಲ್ಲ ಹೇಳ್ತಾ ಹೇಳ್ತಾ ಇದನ್ನೆಲ್ಲ ಭಗವದ್ಗೀತೆಯೇ ಹೇಳಿದೆ ಅಂತ ಬರೆದಿರೋದು ಈ ಪುಸ್ತಕದ ಮುಖ್ಯ ಮಸಲತ್ತು.
ಭಗವದ್ಗೀತೆ ವಿಷಯಕ್ಕೆ ಬರೋದಾದ್ರೆ ಈ ಗ್ರಂಥದ ಮೇಲೆ ಲೆಕ್ಕವಿಲ್ಲದಷ್ಟು ವ್ಯಾಖ್ಯಾನಗಳು ಬಂದಿವೆ, ಬೇರೆ-ಬೇರೆ ರೀತಿಯಲ್ಲಿ ವಿದ್ವತ್ ಸಂಘರ್ಷಗಳು ಸಹ ನಡೆದಿವೆ… ಅವೆಲ್ಲ ಬೇರೆಯದೇ ಲೋಕ. ಆದರೆ ಈ ಪುಸ್ತಕ ಗೀತೆಯನ್ನು ಹೊಗಳುವಂತೆ ನಟನೆ ಮಾಡ್ತಾ ಮಾಡ್ತಾ, ನೀವು ಯಾವುದೋ ದೈವವನ್ನು ನಂಬುವುದು ಸಲ್ಲ ಅಂತ ಹೇಳುತ್ತೆ, ನಿಮ್ಮ ಹಿರಿಯರನ್ನು ತಿಥಿ ಅಥವಾ ಇನ್ಯಾವುದೇ ರಿವಾಜಿನ ಮೂಲಕ ನೆನಪಿಸಿಕೊಳ್ಳೋದೇ ತಪ್ಪು ಅಂತ ಹೇಳುತ್ತೆ, ಅಷ್ಟೇ ಏಕೆ, ಈ ಪುಸ್ತಕದ ಪ್ರಕಾರ ನೀವು ಶಿವನನ್ನು ಪೂಜಿಸೋದು ಸಹ ಬಹಳ ದೊಡ್ಡ ತಪ್ಪು!
ಅಯ್ಯೋ ಬಿಡಿ, ನಮ್ಮ ನಡುವೆ ಆಗಾಗ ಇಂಥದೇ ಅಪದ್ಧಗಳಿಗೆ ಸುದ್ದಿ ಮಾಡಿಕೊಂಡಿರುವಂಥ ಬುದ್ಧಿಜೀವಿಗಳ ಅಭಿಪ್ರಾಯದ ಥರವೇ ಇದೂ ಒಂದು ಅಂತ ನಿರ್ಲಕ್ಷಿಸಬಹುದಿತ್ತು. ಆದರೆ, ಈ ಮೇಲೆ ಹೇಳಿದ ಎಲ್ಲ ಸಂಗತಿಗಳು ಭಗವದ್ಗೀತೆಯಲ್ಲೇ ಹೇಳಿರೋದು ಅಂತ ಈ ಪುಸ್ತಕ ಹೇಳುತ್ತೆ ಅನ್ನೋದು ಇಲ್ಲಿ ನಿರ್ಲಕ್ಷ ಮಾಡಲಾಗದೇ ಇರಬೇಕಾದಂಥ ವಿಷಯ.

ಈ ಪುಸ್ತಕದ ಮೂಲ ಇರೋದು ಸಂತ ರಾಮಪಾಲ ಅಂತ ಗುರುತಿಸಿಕೊಂಡಿರೋ ಉತ್ತರ ಭಾರತದ ಒಬ್ಬ ವ್ಯಕ್ತಿ ಮತ್ತವನ ಪಟಾಲಂ ಬಳಿ. ಪುಸ್ತಕದ ಪ್ರಾರಂಭದಲ್ಲಿ ಲೇಖಕನ ಹೆಸರು ಸಹ ಸಂತ ರಾಮಪಾಲ ಅಂತಿದೆ, ಮತ್ತೆ ಮುದ್ರಣ-ವೆಬ್ ಸೈಟ್ ಇತ್ಯಾದಿ ವಿವರಗಳು ಸಹ ಈ ಪುಸ್ತಕ ಅವರಿಂದಲೇ ಪ್ರಚಾರವಾಗ್ತಿರೋದು ಅನ್ನೋದರ ಮಾಹಿತಿ ಕೊಡುತ್ತೆ.

ಈ ಸಂತ ರಾಮಪಾಲ ಮತ್ತವರ ಬೆಂಬಲಿಗರ ಪ್ರತಿಪಾದನೆ ಏನೆಂದರೆ- ಕಬೀರನೇ ನಿಜವಾದ ಅಲ್ಲಾಹ್, ಮತ್ತೆ ಸಂತ ರಾಮಪಾಲನೇ ದೇವರ ಕೊನೆಯ ಪ್ರವಾದಿ ಅನ್ನೋದು. ಈ ಪ್ರತಿಪಾದನೆಯ ಮೇಲೆ ಈತ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿರುವಂಥ ವ್ಯಕ್ತಿ. ಉತ್ತರ ಭಾರತದಲ್ಲಿ ಸ್ವಲ್ಪಮಟ್ಟಿಗೆ ತನ್ನ ಅಸ್ತಿತ್ವ ಕಂಡುಕೊಂಡಿದ್ದ ಈ ವ್ಯಕ್ತಿ ಈಗ ದಕ್ಷಿಣ ಭಾರತದಲ್ಲಿ ತನ್ನ ಮಾರ್ಕೆಟ್ ವಿಸ್ತರಿಸಿಕೊಳ್ಳೋ ಪ್ರಯತ್ನದಲ್ಲಿರೋದನ್ನು ಜನರು ನಿಲ್ಲೋ ಪ್ರದೇಶಗಳಲ್ಲೆಲ್ಲ 10 ರುಪಾಯಿಗೆ ಬಿಕರಿಯಾಗ್ತಿರೋ ಈ ಪುಸ್ತಕ ಸಾರುತ್ತಿದೆ.

ಹರ್ಯಾಣದಲ್ಲಿ ಈ ರಾಮಪಾಲ ವಿರುದ್ಧ ಅದಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಮತಾಂತರಿಗಳು ಮತ್ತು ತೀವ್ರವಾದಿಗಳು ಅನುಸರಿಸುವಂತೆಯೇ ಸನಾತನದ ಧರ್ಮವನ್ನು ಅವಹೇಳನ ಮಾಡಿ ತನ್ನ ಮಾರ್ಗ ಸೃಷ್ಟಿಸಿಕೊಳ್ಳುತ್ತಿರುವ ಈ ವ್ಯಕ್ತಿಯ ನಡೆಗಳು ಸಾಮಾಜಿಕ ಕ್ಷೋಭೆಗೆ ಕಾರಣವಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!