ಹೊಸದಿಗಂತ ವರದಿ, ಗದಗ :
ಒಂದು ದಿನ ಕಳೆದಿದ್ದರೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಬಾಲಕನ ವಿಧಿಯಾಟವೇ ಬೇರೆಯಾಗಿತ್ತು, ತಂದೆ-ತಾಯಿ ಇಲ್ಲದೆ ಅಜ್ಜಿಯ ಆಶ್ರಯದಲ್ಲಿ ಅಜ್ಜಿಗೆ ಆಸರೆಯಾಗಿದ್ದ ಅವನ ಬದುಕು ಒಂಬತ್ತು ವರ್ಷಕ್ಕೆ ಮುಗಿಸಿ ತಂದೆ-ತಾಯಿಯ ಬಳಿಗೆ ಹೋಗಿ ಅಜ್ಜಿಯನ್ನು ಅನಾಥವನ್ನಾಗಿಸಿರುವದನ್ನು ನೋಡಿ ಎಲ್ಲರ ಕಣ್ಣಲ್ಲಿಯೂ ನೀರು ತುಂಬಿತ್ತು.
ನಗರದ ಗಂಗಾಪೂರ ಪೇಟೆಯಲ್ಲಿರುವ ಐತಿಹಾಸಿಕ ಕೊನೇರಿ ಹೊಂಡದ ಹತ್ತಿರ ರವಿವಾರ ಮಧ್ಯಾಹ್ನ ಅಟವಾಡುತ್ತಿದ್ದ ಮೂವರ ಬಾಲಕರಲ್ಲಿ ಪ್ರಥಮ ಅಶೋಕ ಮಾಡೋಳ್ಳಿ (೦೯) ಎಂಬ ಬಾಲಕ ಅಕಸ್ಮಿಕವಾಗಿ ಕಾಲುಜಾರಿ ಹೊಂಡಕ್ಕೆ ಬಿದ್ದಿದ್ದು ಗಾಬರಿಗೊಂಡ ಇನ್ನಿಬ್ಬರು ಬಾಲಕರು ಕಿರುಚುತ್ತ ಹೊರೆಗೆ ಬಂದು ಜನರಿಗೆ ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಯುವಕರು ಹೊಂಡಕ್ಕೆ ಇಳಿದು ಬಾಲಕನ ದೇಹಕ್ಕಾಗಿ ಹುಡುಕಾಟ ನಡೆಸಿರು. ನಂತರ ಸುದ್ದಿತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುರಿಯುವ ಮಳೆಯಲ್ಲಿಯೂ ಕಾರ್ಯಾಚರಣೆಗೆ ಇಳಿದರು. ಸಂಜೆ ವರೆಗೂ ಹುಡಕಾಟ ನಡೆಸಿದರು. ಇವರೆಗೂ ಬಾಲಕನ ದೇಹವು ಪತ್ತೆಯಾಗಿಲ್ಲ ಹೊರಗಡೆ ಕುಟುಂಬಸ್ತರ ಅಕ್ರಂದನ ಮುಗಿಲು ಮುಟ್ಟಿತ್ತು. ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಮೊಮ್ಮಗನ ಸಾವನ್ನು ಕಂಡು ಎಲ್ಲರೂ ಮರಗುತ್ತಿದ್ದರು.
ಹುಟ್ಟುಹಬ್ಬ ಆಚರಣೆಗೆ ಮುನ್ನವೇ ಜೀವ ಕಸಿದುಕೊಂಡ ವಿಧಿ : ರವಿವಾರ ಕೊನೇರಿ ಹೊಂಡದಲ್ಲಿ ಕಾಲುಜಾರಿ ಬಿದ್ದು ಪ್ರಥಮ ಮಾಡೋಳ್ಳಿ ಅವನ ಹುಟ್ಟುಹಬ್ಬ ಇದೇ ಸೋಮವಾರ ನಡೆಯಬೇಕಿತ್ತು. ಅದಕ್ಕಾಗಿ ಅಜ್ಜಿಯು ೫ ಕೆಜಿ ಕೇಕ್‌ನ್ನು ಆರ್ಡರ್ ಮಾಡಿ, ಮೊಮ್ಮಗನಿಗೆ ಹೊಸ ಬಟ್ಟೆಯನ್ನು ಸಹ ಖರೀದಿಸಿದ್ದಳು. ಆದರೆ, ವಿಧಿಯಾಟವೆ ಬೇರೆಯಾಗಿತ್ತು. ತಂದೆ-ತಾಯಿಯನ್ನು ಕಳೆದುಕೊಂಡು ೧೪ ತಿಂಗಳ ಮಗುವಿದ್ದಾಗಿನಿಂದಲೆ ಅಜ್ಜಿ ಅಶ್ರಯದಲ್ಲಿದ್ದ ಪ್ರಥಮನಿಗೆ ವಿಧಿ ಕ್ರೂರತನ ಜನರ ಕಣ್ಣಲ್ಲಿ ನೀರು ತರಿಸಿತ್ತು,
ಹೊಂಡದ ಪಕ್ಕದಲ್ಲಿ ಆಟವಾಡುತ್ತ ಕಾಲು ಜಾರಿ ಬಿದ್ದು ಬಾಲಕನ ದೇಹ ಪತ್ತೆಗಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡಕಾಟ ನಡೆಸಿದರೂ ಶವ ಮಾತ್ರ ಇನ್ನೂ ಪತ್ತೆಯಾಗಿಲ್ಲ.