Tuesday, March 28, 2023

Latest Posts

ಡಿಕ್ಕಿ ಹೊಡೆದು ಕಣಿವೆಗೆ ಉರುಳಿದ ಕಾರು-ಬಸ್: 30ಜನರ ದುರಂತ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಸ್‌ವೊಂದು ಕಾರಿಗೆ ಡಿಕ್ಕಿ ಹೊಡೆದು ಕಣಿವೆಗೆ ಉರುಳಿದ್ದು, ಈ ಅಪಘಾತದಲ್ಲಿ 30 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನೆರೆ ದೇಶ ಪಾಕಿಸ್ತಾನದಲ್ಲಿ ನಡೆದಿದೆ. ಪೇಶಾವರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ದಿಯಾಮಿರ್ ಪ್ರದೇಶದ ಶಾಟಿಯಲ್ ಚೌಕ್ ನಲ್ಲಿ ಈ ಘಟನೆ ನಡೆದಿದೆ. ಬಸ್ ಗಿಲ್ಗಿಟ್ ನಿಂದ ರಾವಲ್ಪಿಂಡಿಗೆ ಹೋಗುವಾಗ ಕಾರಿಗೆ ಬಸ್ ಡಿಕ್ಕಿ ಹೊಡೆದು ಎರಡೂ ವಾಹನಗಳು  ಮಂಗಳವಾರ ತಡರಾತ್ರಿ ಕಣಿವೆಗೆ ಬಿದ್ದಿವೆ. ಘಟನೆ ತಿಳಿದ ತಕ್ಷಣ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆದರೆ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತಮ ವೈದ್ಯಕೀಯ ಸೇವೆ ಸಿಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಪಘಾತದ ಬಗ್ಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಸ್ ಅಪಘಾತದ ಬಗ್ಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಮುಖ್ಯಮಂತ್ರಿ ಕೂಡಾ ಆಘಾತ ವ್ಯಕ್ತಪಡಿಸಿ ಈ ಅವಘಡದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಇದಲ್ಲದೆ, ತುರ್ತು ಪರಿಸ್ಥಿತಿಗಳ ಮೇಲ್ವಿಚಾರಣೆಗಾಗಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪಾಕಿಸ್ತಾನದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ತಿಂಗಳು, ಬಲೂಚಿಸ್ತಾನದ ಲಾಸ್ ಬೇಲಾದಲ್ಲಿ ಪ್ರಯಾಣಿಕರ ಕೋಚ್ ಕಂದರಕ್ಕೆ ಬಿದ್ದು ಸುಮಾರು 41 ಜನರು ಸಾವನ್ನಪ್ಪಿದ್ದರು. ಕ್ವೆಟ್ಟಾದಿಂದ ಕರಾಚಿಗೆ 48 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಲಾಸ್ಬೆಲಾ ಬಳಿ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದ ನಂತರ ಕಣಿವೆಗೆ ಬಿದ್ದಿದೆ. ಆಗ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೃತರ ಸಂಖ್ಯೆ ಹೆಚ್ಚಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!