ರಾಜ್ಯದ 35 ಸಾವಿರ ಮುಜರಾಯಿ ದೇವಸ್ಥಾನಗಳ ಸಮಗ್ರ ಸಮೀಕ್ಷೆ: ಸಚಿವೆ ಶಶಿಕಲಾ ಜೊಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ರಾಜ್ಯದ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 35 ಸಾವಿರಕ್ಕೂ ಹೆಚ್ಚಿನ ದೇವಸ್ಥಾನಗಳ ಸಮಗ್ರ ಆಸ್ತಿಯನ್ನೂ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ.

ಈ ಕುರಿತು ಮಾಹಿತಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ , ದೇವಸ್ಥಾನದ ಆಸ್ತಿ ಸಂರಕ್ಷಣೆಯ ಪ್ರಮುಖ ಉದ್ದೇಶದಿಂದ, ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳು ಮತ್ತು ಅವುಗಳ ಆಸ್ತಿ ವಿವರಗಳನ್ನು ಸಮಗ್ರ ಸಮೀಕ್ಷೆ ಮಾಡಲು ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಎ, ಬಿ ಮತ್ತು ಸಿ ದರ್ಜೆಯ 35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿವೆ. ಇವು ನಮ್ಮ ಗೆಜೆಟ್‌ನ ಪಟ್ಟಿಯಲ್ಲಿ ನಮೂದಾಗಿವೆ. ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಂರಕ್ಷಣೆ, ದೇವಾಲಯಗಳ ಸಮಗ್ರ ಮಾಹಿತಿಯನ್ನು ಕಲೆ ಹಾಕುವುದು ಹಾಗೂ ಅವುಗಳ ವಾಸ್ತವಿಕ ಸಮೀಕ್ಷೆ ನಡೆಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ವಿಶೇಷ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.

ನಮ್ಮ ಪಟ್ಟಿಯಲ್ಲಿರುವ ದೇವಸ್ಥಾನಗಳ ಬಳಿ ತೆರಳುವುದು, ಅವುಗಳ ವಾಸ್ತವಿಕ ಚಿತ್ರಣವನ್ನು ಡಿಜಿಟಲ್‌ ಆಗಿ ನಮೂದಿಸುವುದು ಹಾಗೂ ಅವುಗಳಲ್ಲಿರುವ ಆಸ್ತಿಗಳ ವಾಸ್ತವಿಕ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಕಲೆ ಹಾಕುವುದನ್ನು ಮಾಡಲಾಗುವುದು.ದೇವಸ್ಥಾನಗಳ ಫೋಟೋ, ಅವುಗಳ ಆದಾಯ, ಅವುಗಳಲ್ಲಿನ ನಿರ್ವಹಣೆಯ ಮಾಹಿತಿ ಹೀಗೆ ಹತ್ತು ಹಲವು ವಿಷಯಗಳನ್ನು ಕಲೆ ಹಾಕುವುದು ಹಾಗೂ ಅವುಗಳನ್ನು ಡಿಜಿಟಲ್‌ ರೂಪದಲ್ಲಿ ಜನ ಸಾಮಾನ್ಯರಿಗೂ ಸುಲಭವಾಗಿ ಸಿಗುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಜಯರಾಂ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!