ಬಾಳಿನಲ್ಲಿ ಸಿಹಿ ಕಹಿಗೆ ಜೊತೆಯಾಗಿದ್ದ ದಂಪತಿ ಸಾವಿನಲ್ಲೂ ಜೊತೆಯಾಗಿಯೇ ನಡೆದರು…

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈವಾಹಿಕ ಜೀವನದ ಸುವರ್ಣ ಸಂಭ್ರಮವನ್ನು ಕಂಡಿದ್ದ ಸತಿ ಪತಿ ಜೊತೆಯಾಗಿ ಚಿತೆಗೇರುವಂತಾದ ಘಟನೆಯು ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ನಡೆದಿದೆ.
ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಮತ್ತು ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಶೆಟ್ಟಿ ಸತಿ-ಪತಿ ಕುಟ್ಟಿ ಶೆಟ್ಟಿ ತನ್ನ ೮೦ರ ಹರೆಯದಲ್ಲಿ ವೃದ್ಧಾಪ್ಯದ ಕಾರಣದಿಂದ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದ್ದರು.
ಹೊರ ರಾಜ್ಯ ಹಾಗೂ ಇತರೆಡೆಗಳಿಂದ ಮಕ್ಕಳು ಅಂತಿಮ ಸಂಸ್ಕಾರಕ್ಕೆ ಆಗಮಿಸಲಿದ್ದ ಕಾರಣದಿಂದ ಪಾರ್ಥಿವ ಶರೀರವನ್ನು ಕಾಪಿಡಲಾಗಿತ್ತು. ಆದರೆ ಬುಧವಾರ ಮುಂಜಾನೆ ಮಕ್ಕಳು ಆಗಮಿಸಿದ ಬಳಿಕ ಮೃತದೇಹವನ್ನು ಮೂಲಮನೆಯಿಂದ ತಮ್ಮ ಸ್ವಂತ ಮನೆಗೆ ತರಲಾಗಿತ್ತು.
ಮೃತದೇಹವನ್ನು ಮನೆಯೊಳಗೆ ತಂದು ನೆಲಕ್ಕೆ ಇಟ್ಟ ಕೆಲವೇ ಕ್ಷಣದಲ್ಲಿ ಪತ್ನಿ ರೇವತಿ ಕೆ. ಶೆಟ್ಟಿ (೭೫) ಹೃದಯಾಘಾತಕ್ಕೆ ಒಳಪಟ್ಟು ಕುಸಿದು ಬಿದ್ದು ನಿಧನ ಹೊಂದಿರುತ್ತಾರೆ.
ಸಾವಿನಲ್ಲೂ ಒಂದಾದ ಸತಿ-ಪತಿ ಗಳ ಪಾರ್ಥಿವ ಶರೀರವನ್ನು ಮಕ್ಕಳು ಮತ್ತು ಕುಟುಂಬಿಕರು ಜೊತೆ ಸೇರಿ ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಮಾರ್ಗದರ್ಶನದಲ್ಲಿ ಬೆಳಪು ಧೂಮಪ್ಪಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೊತೆಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.
ವಿವಾಹವಾಗಿ ಐದು ದಶಕಗಳ ಕಾಲ ಜೊತೆಯಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು, ಸಿಹಿ ಕಹಿ, ನೋವು ಕಷ್ಟ ಸವಾಲುಗಳನ್ನು ಒಟ್ಟಿಗೇ ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಎನ್ನಲಾಗುತ್ತಿದ್ದು, ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!