ಸಯಾಮಿ ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: 27 ಗಂಟೆಗಳಲ್ಲಿ ಹೊಸ ಜನ್ಮ ಪಡೆದ ಪುಟಾಣಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳಿಬ್ಬರು ಟ್ವಿನ್ಸ್ ಆದರೆ ಇಬ್ಬರ ತಲೆಯು ಪರಸ್ಪರ ಅಂಟಿಕೊಂಡು ಹುಟ್ಟಿದ ಪರಿಣಾಮ ಇವರು ಒಬ್ಬರನ್ನೊಬ್ಬರು ಬಿಟ್ಟು ಸ್ವತಂತ್ರವಾಗಿ ಇರುವಂತಿರಲಿಲ್ಲ. ವೈದ್ಯರು ಹಾಗೂ ಮಕ್ಕಳ ಪೋಷಕರಿಗೂ ಇವರನ್ನು ಬೇರ್ಪಡಿಸುವುದು ಸವಾಲಿನ ವಿಚಾರವಾಗಿತ್ತು.

ಆದರೆ ಕಡೆಗೂ ದೇವರ ಮೇಲೆ ಭಾರ ಹಾಕಿ ವೈದ್ಯರು ಈ ಸಯಾಮಿ ಮಕ್ಕಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಬೇರ್ಪಡಿಸುವ ಮೂಲಕ ಹೊಸ ಜನ್ಮ ನೀಡಿದ್ದಾರೆ.

ಹೌದು, ಬ್ರೆಜಿಲ್‌ನ ರಿಯೋ ಡಿ ಜಿನೈರೋದಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಬ್ರಿಟಿಷ್‌ ನರ ಶಸ್ತ್ರಜ್ಞ, ಮಕ್ಕಳ ತಜ್ಞ, ಸರ್ಜನ್‌ ಡಾ. ನೂರ್ ಉಲ್‌ ಒವಸೆ ಜಿಲಾನಿ ಈ ಅಪರೂಪದ ಅಪರೇಷನ್ ಅನ್ನು ನಡೆಸಿದ್ದಾರೆ.
ಸುಮಾರು 27 ಗಂಟೆಗಳ ಸುದೀರ್ಘ ಸಮಯವನ್ನು ಈ ಯಶಸ್ವಿ ಶಸ್ತ್ರಚಿಕಿತ್ಸೆ ತೆಗೆದುಕೊಂಡಿದೆ.

ಬ್ರೆಜಿಲ್‌ನ ಅರ್ಥೂರ್ ಲಿಮಾ ಹಾಗೂ ಬೆರ್ನಾರ್ಡೊ ಪರಸ್ಪರ ತಲೆ ಅಂಟಿಕೊಂಡೇ ಹುಟ್ಟಿದ್ದರು. ಪ್ರಸ್ತುತ ಮೂರು ವರ್ಷದ ಈ ಅವಳಿ ಮಕ್ಕಳಿಗೆ ವೈದ್ಯರು ಒಟ್ಟು ಏಳು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಗ್ರೇಟ್‌ ಒರ್ಮೊಡ್‌ ಸ್ಟ್ರೀಟ್‌ ಆಸ್ಪತ್ರೆಯ ಮಕ್ಕಳ ತಜ್ಞ, ಸರ್ಜನ್‌ ಡಾ. ನೂರ್ ಉಲ್‌ ಒವಸೆ ಜಿಲಾನಿ ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದರು.. ಇದುವರೆಗೆ ತಾವು ನಡೆಸಿದರಲ್ಲೇ ಅತ್ಯಂತ ಕಷ್ಟಕರವಾದ ಪ್ರತ್ಯೇಕಗೊಳಿಸುವ ಪ್ರಕ್ರಿಯೆಯಾಗಿತ್ತು ಎಂದು ಸರ್ಜರಿ ಮಾಡಿದವರು ಹೇಳಿದ್ದಾರೆ.

ಲಂಡನ್ ಮತ್ತು ರಿಯೊದ ಶಸ್ತ್ರಚಿಕಿತ್ಸಕರು ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್‌ಗಳ ಆಧಾರದ ಮೇಲೆ ಅವಳಿಗಳ ವಿಆರ್‌ ಪ್ರೊಜೆಕ್ಷನ್‌ಗಳನ್ನು ಬಳಸಿಕೊಂಡು ತಿಂಗಳುಗಳ ಕಾಲ ಹಲವು ತಂತ್ರಗಳ ಟ್ರಯಲ್ ಮಾಡಿದ್ದರು. ಇದೊಂದು ಬಾಹ್ಯಾಕಾಶ ಯುಗದ ವಿಚಾರ ಎಂದು ವಿವರಿಸಿದ ಡಾ ಜೀಲಾನಿ, ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ, ಪ್ರತ್ಯೇಕ ದೇಶಗಳಲ್ಲಿನ ಶಸ್ತ್ರಚಿಕಿತ್ಸಕರು ಹೆಡ್‌ಸೆಟ್‌ಗಳನ್ನು ಧರಿಸಿ ಒಂದೇ ವರ್ಚುವಲ್ ರಿಯಾಲಿಟಿ ರೂಮ್ ನಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.

ಶಸ್ತ್ರಚಿಕಿತ್ಸೆ ನಡೆಸಿದ 27 ಗಂಟೆಗಳ ಅವಧಿಯಲ್ಲಿ ತಾನು ಕೇವಲ 15 ನಿಮಿಷ ಆಹಾರ ಹಾಗೂ ನೀರು ಕುಡಿಯುವುದಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಒಂದಾಗಿದ್ದ ಸೋದರರು ಪ್ರತ್ಯೇಕವಾದ ನಂತರ ಅವರ ರಕ್ತದೊತ್ತಡ ಹಾಗೂ ಹೃದಯ ಬಡಿತ ತೀವ್ರವಾಗಿ ಏರಿಕೆಯಾಗಿತ್ತು. ಅದು ಅವರು ಪರಸ್ಪರ ಸ್ಪರ್ಶಿಸುವವರೆಗೆ ಸುಮಾರು ನಾಲ್ಕು ದಿನಗಳ ಕಾಲ ಏರುಗತಿಯಲ್ಲೇ ಇತ್ತು ಎಂದು ಅವರು ಹೇಳಿದರು. ಸದ್ಯ ಮಕ್ಕಳು ಹುಷಾರಾಗುತ್ತಿದ್ದಾರೆ.

ವೈದ್ಯ ಜಿಲಾನಿ ಜೊತೆ ಡಾ. ಗೆಬ್ರಿಯಲ್‌ ಮುಫರೆಜ್‌ ಕೂಡ ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದರು. ಈ ಮಕ್ಕಳ ಪೋಷಕರು ಎರಡು ವರ್ಷಗಳ ಹಿಂದೆ ತಾವು ವಾಸವಿದ್ದ ರೊರೈಮ ಪ್ರದೇಶದಿಂದ ರಿಯೊಗೆ ಆಗಮಿಸಿ ತಮ್ಮ ಮಕ್ಕಳ ಸಮಸ್ಯೆಯನ್ನು ಕೇಳಿ ಕೊಂಡಿದ್ದರು. ಅವರು ಬಹುತೇಕ ನಮ್ಮ ಈ ಆಸ್ಪತ್ರೆಯ ಕುಟುಂಬದ ಭಾಗವಾಗಿದ್ದರು. ಪರಿಣಾಮ ಈಗ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದು ಮಕ್ಕಳ ಬದುಕು ಬದಲಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!