ಹಾಡಹಗಲೇ ಹುಲಿ ದಾಳಿಗೆ ಹಸು ಬಲಿ

ಹೊಸದಿಗಂತ ವರದಿ, ಶ್ರೀಮಂಗಲ:

ಬಯಲಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ಹಾಡಹಗಲೇ ಹುಲಿ ಎರಗಿ ಕೊಂದಿರುವ ಘಟನೆ ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ರೈತ ಬೊಳ್ಳೇರ ಚಿಣ್ಣಪ್ಪ ಅವರು ಮನೆಯ ಹತ್ತಿರ ಬಯಲಲ್ಲಿ ಮೇಯಲು ಕಟ್ಟಿದ್ದ ಗಬ್ಬದ ಹಸುವಿನ ಮೇಲೆ ಸೋಮವಾರ ಮಧ್ಯಾಹ್ನ ಹುಲಿ ಎರಗಿದ್ದು,ಈ ಸಂದರ್ಭ ಹಸುವಿನ ಅರಚಾಟ ಕೇಳಿ ಚಿಣ್ಣಪ್ಪ ಹಾಗೂ ಕಾರ್ಮಿಕರು ಜೋರಾಗಿ ಕೂಗಿಕೊಂಡಾಗ ಹಸುವನ್ನು ಕೊಂದ ಹುಲಿ ಸಮೀಪದ ಕಾಫಿ ತೋಟಕ್ಕೆ ನುಸುಳಿದೆ.
ಮೇ 12 ರಂದು ಚಿಣ್ಣಪ್ಪ ಅವರಿಗೆ ಸೇರಿದ ಇನ್ನೊಂದು ಹಸುವಿನ ಮೇಲೆ ಹುಲಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು. ಈ ಹಸು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ. ಇದರ ನಡುವೆಯೇ ಇನ್ನೊಂದು ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದಿರುವುದು ಚಿಣ್ಣಪ್ಪ ಹಾಗೂ ಅವರ ಕುಟುಂಬಕ್ಕೆ ತೀವ್ರ ನೋವು ಉಂಟು ಮಾಡಿದೆ.
ಹಾಡಹಗಲೇ ಹುಲಿ ದಾಳಿ ಮಾಡಿರುವುದರಿಂದ ಮತ್ತು ಹುಲಿ ತೋಟದಲ್ಲಿ ಇರುವ ಸಾಧ್ಯತೆ ಇರುವುದರಿಂದ ಮನೆಯಿಂದ ಹೊರಗೆ ಬರಲು, ತೋಟದಲ್ಲಿ ಕಾರ್ಮಿಕರು,ಬೆಳೆಗಾರರು ಕೆಲಸ ಮಾಡಲು ಆತಂಕ ಉಂಟು ಮಾಡಿದೆ ಎಂದು ಕೊಡಗು ಬೆಳೆಗಾರ ಒಕ್ಕೂಟದ ಬಿರುನಾಣಿ ವಿಭಾಗದ ಅಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಕು ದಿನದ ಹಿಂದೆ ಚಿಣ್ಣಪ್ಪ ಅವರ ಹಸುವಿನ ಮೇಲೆ ದಾಳಿ ಮಾಡಿದಾಗ ಅರಣ್ಯ ಇಲಾಖೆ ಎಚ್ಚೆತ್ತು ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದರೆ,ಎರಡನೇ ದಾಳಿ ಆಗುತ್ತಿರಲಿಲ್ಲ. ಕೂಡಲೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಬೇಕು.ಹಸು ಕಳೆದುಕೊಂಡ ಚಿಣ್ಣಪ್ಪ ಅವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಅಪ್ಪುಟ ಪೊನ್ನಪ್ಪ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!