ಹೊಸದಿಗಂತ ವರದಿ ಕಲಬುರಗಿ:
ರೈತರಿಂದ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅನಿರೀಕ್ಷಿತ ಪರಿಶೀಲನೆ ನಡೆಸಿದರು.
78 ಮಳಿಗೆಗಳ ತಪಾಸಣೆ
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದ ತಂಡ ಕಲಬುರಗಿ, ಆಳಂದ, ಅಫಜಲಪುರ, ಚಿಂಚೋಳಿ ಹಾಗೂ ಚಿತ್ತಾಪುರ ಭಾಗಗಳಲ್ಲಿನ ಕೃಷಿ ಪರಿಕರ ಮತ್ತು ರಸಗೊಬ್ಬರ ಮಳಿಗೆಗಳನ್ನು ಪರಿಶೀಲಿಸಿತು. ಒಟ್ಟು 78 ಮಳಿಗೆಗಳ ತಪಾಸಣೆ ನಡೆಸಲಾಯಿತು.
42 ಮಳಿಗೆಗಳಿಗೆ ನೋಟಿಸ್
ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ 42 ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜೊತೆಗೆ 14 ಮಳಿಗೆಗಳ ವಿರುದ್ಧ ಮಾರಾಟ ತಡೆ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:
20 ಲಕ್ಷ ರೂ. ಮೌಲ್ಯದ ದಾಸ್ತಾನು ಸ್ಥಗಿತ
ಸುಮಾರು 352.77 ಟನ್ ರಸಗೊಬ್ಬರ ದಾಸ್ತಾನು ವಿತರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದರ ಮೌಲ್ಯ ಸುಮಾರು 20.52 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂತ್ರಾಂಶ ಮತ್ತು ದಾಖಲೆಗಳ ಪರಿಶೀಲನೆ
K-KISAN ತಂತ್ರಾಂಶದ ಮೂಲಕ ಯೂರಿಯಾ ವಿತರಣೆ, ಪಿಒಎಸ್ ದಾಖಲೆಗಳು ಹಾಗೂ ಗೋದಾಮುಗಳಲ್ಲಿನ ದಾಸ್ತಾನು ವಿವರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಎಚ್ಚರಿಕೆ ನೀಡಿದ್ದಾರೆ.



