ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತ್ರೆಯಲ್ಲಿ ಖರೀದಿಸಿದ ಸಾಮಾನ್ಯ ಬೆಡ್‌ಶೀಟ್‌ವೊಂದು ಮಹಿಳೆಯೊಬ್ಬರಿಗೆ ಅಚ್ಚರಿಯ ಜೊತೆಗೆ ಆತಂಕವನ್ನೂ ಉಂಟುಮಾಡಿದೆ. ಹೌದು! ಬೆಡ್‌ಶೀಟ್‌ಗೆ ಅಳವಡಿಸಲಾಗಿದ್ದ ‘Made in Pakistan’ ಟ್ಯಾಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪೂಜಾ ಸರಾಫ್ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, ಪಿಂಪ್ರಿ-ಚಿಂಚ್‌ವಾಡ್‌ನ ಮೊರಯಾ ಗೋಸಾವಿ ದೇವಸ್ಥಾನದ ಜಾತ್ರೆಯಲ್ಲಿ ಖರೀದಿಸಿದ್ದ ಬೆಡ್‌ಶೀಟ್‌ನಲ್ಲಿ ಈ ಟ್ಯಾಗ್ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಬೆಡ್‌ಶೀಟ್ ತೊಳೆಯುವ ವೇಳೆ ಲೇಬಲ್ ಗಮನಕ್ಕೆ ಬಂದಿದ್ದು, ಬಳಿಕ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಬಳಿಕ ಪೊಲೀಸರ ಎಂಟ್ರಿ
ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ವಿಶೇಷ ತಂಡ ರಚಿಸಿ ಪರಿಶೀಲನೆ ಆರಂಭಿಸಿದ್ದಾರೆ. ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗದಿದ್ದರೂ, ವಿಡಿಯೋ ಆಧರಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ:
ಕಠಿಣ ಕ್ರಮಕ್ಕೆ ಮಹಿಳೆಯ ಆಗ್ರಹ
ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆ ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ. ಗ್ರಾಹಕರು ಖರೀದಿಸುವ ಮೊದಲು ಉತ್ಪನ್ನಗಳ ವಿವರಗಳನ್ನು ಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ಹಿಂದೆ ಕೂಡ ಪ್ರಕರಣಗಳು ಬೆಳಕಿಗೆ
ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಪಾಕಿಸ್ತಾನ ಮೂಲದ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಕೆಲವು ವ್ಯಾಪಾರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಹಲವು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆಗಳೂ ನಡೆದಿದ್ದವು.



