Friday, July 1, 2022

Latest Posts

ಕೊಡಗಿನಲ್ಲಿ ಮತ್ತೆ ಕೇಳಿಬಂದ ಪ್ರತ್ಯೇಕತೆಯ ಕೂಗು; ರೈತ ಸಂಘದ ಸಭೆಯಲ್ಲಿ ಪ್ರತ್ಯೇಕ ರಾಜ್ಯದ ಪ್ರಸ್ತಾಪ

ಹೊಸದಿಗಂತ ವರದಿ, ಮಡೀಕೇರಿ
ಹಲವು ವರ್ಷಗಳಿಂದ‌ ನೇಪಥ್ಯಕ್ಕೆ‌ ಸರಿದಿದ್ದ ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಇದೀಗ ಮತ್ತೆ ಜೀವ ತುಂಬುವ ಪ್ರಸ್ತಾಪ ಮಂಗಳವಾರ ನಡೆದ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ‌ ಮಹಾಸಭೆಯಲ್ಲಿ ಕೇಳಿ ಬಂದಿದೆ.
ಈ ಹಿಂದೆ ಜಾತಿ ಹಾಗೂ ಭಾಷೆಯ ಆಧಾರದಲ್ಲಿ ಕೊಡಗಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯೊಂದಿಗೆ ಹೋರಾಟ ನಡೆದಿತ್ತಾದರೂ, ಇದಕ್ಕೆ ಪ್ರತಿಯಾಗಿ ಇತರ ಭಾಷೆಗಳನ್ನಾಡುವ ಜನರು ಸಂಘಟಿತರಾಗಿ ಹೋರಾಟ ನಡೆಸಿದ ಪರಿಣಾಮ ಪ್ರತ್ಯೇಕ ರಾಜ್ಯದ ಬೇಡಿಕೆ ನೇಪಥ್ಯಕ್ಕೆ‌ ಸರಿದಿತ್ತು.
ಆದರೆ ಇದೀಗ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಮಹಾಸಭೆಯಲ್ಲಿ ಮತ್ತೆ ಪ್ರತ್ಯೇಕತೆಯ ಕೂಗು ಕೇಳಿ ಬಂದಿದೆ.
ಮಂಗಳವಾರ‌ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರದಲ್ಲಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘಟನೆಯ ಮಹಾಸಭೆಯಲ್ಲಿ ನೆರೆದಿದ್ದ ಸಹಸ್ರಾರು ರೈತರು ಹಾಗೂ ಬೆಳೆಗಾರರು ಜಾತ್ಯತೀತವಾಗಿ, ಪಕ್ಷಾತೀತವಾಗಿ ಈ ಬೇಡಿಕೆಯ ಪರ ಧ್ವನಿ ಮೊಳಗಿಸಿರುವುದು ಎಚ್ಚರಿಕೆಯ ಗಂಟೆಯಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಮೈಸೂರು ಸಂಸ್ಥಾನದ ಜೊತೆಗೆ ವಿಲೀನವಾದ ನಂತರ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲಾ ಸರಕಾರಗಳು, ರಾಜಕೀಯ ಪಕ್ಷಗಳು ಕೊಡಗಿನ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಡಗಿನ ಜಮ್ಮಾ ಸಮಸ್ಯೆ, ಕೊಡಗಿನ ರೈತರಿಗೆ ಅವರ ತೋಟಗಳಲ್ಲಿ ಬೆಳೆದ ಮರಗಳನ್ನು ಮಾರುವ ಹಕ್ಕುಗಳು, ಕೊಡಗಿನ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸರಕಾರ ವಿಫಲವಾಗಿದೆ ಎಂದು ದೂರಿದರು.
ವರ್ಷಂಪ್ರತಿ ಮಳೆಗಾಲದಲ್ಲಿ ವಿಪರೀತ ಮಳೆಯಿಂದಾಗಿ ಕೊಡಗಿನ ರೈತರು ತಮ್ಮ ಬೆಳೆಗಳನ್ನು ಕಳೆದುಕೊಳ್ಳುತ್ತಿರುವುದನ್ನು ಅಧ್ಯಯನ ಮಾಡಿ ವಿಶೇಷವಾದ ಪ್ರಕರಣ ಎಂದು ಪರಿಗಣಿಸಿ ಕೊಡಗಿನ ರೈತರ ಸಾಲ ಮನ್ನಾ ಮಾಡುವುದಾಗಲಿ, ಕೊಡಗಿನ ರೈತರಿಗೆ ಎನ್’ಡಿಆರ್’ಎಫ್ ಹಾಗೂ ಎಸ್’ಡಿಆರ್’ಎಫ್’ನಡಿ ವೈಜ್ಞಾನಿಕವಾದ ಮಾನದಂಡದಲ್ಲಿ ಪರಿಹಾರ ವಿತರಣೆ ಮಾಡುವುದಾಗಲಿ, ನಿರಂತರ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿನ ರೈತರ ಸಾಲ ಮನ್ನಾ, ಮೂಲನಿವಾಸಿಗಳಿಗೆ ವಸತಿ, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ ಮಾನವ ಸಂಘರ್ಷಕ್ಕೆ ಶಾಶ್ವತವಾದ ಪರಿಹಾರ, ಕೊಡಗಿನ ಜನರನ್ನು ಪ್ರಕೃತಿ ವಿಕೋಪದಿಂದ ರಕ್ಷಣೆ ಮಾಡಿ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ, ಕೊಡಗಿನ ಜ್ವಲಂತ ಸಮಸ್ಯೆಗಳಾದ ಕಂದಾಯ, ಸರ್ವೆ, ವಿದ್ಯುತ್ ಇಲಾಖೆಯ ಅವ್ಯವಸ್ಥೆ ಬಗೆಹರಿಸಲು ಇಲ್ಲಿಯವರೆಗೆ ಯಾವುದೇ ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳು ಪ್ರಯತ್ನಿಸದೆ ಕೇವಲ ಭರವಸೆಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಗುಡುಗಿದರು.
ಇದಕ್ಕೆ ಸಭೆಯಲ್ಲಿ ನೆರೆದಿದ್ದ ಸಹಸ್ರಾರು ರೈತರು, ಕೊಡಗಿನ ಸಮಸ್ತ ಸಾರ್ವಜನಿಕರು ಜಾತಿ ಮತ ಬೇಧ ರಾಜಕೀಯ ರಹಿತವಾಗಿ, ಎಲ್ಲಾ ಸಂಘ ಸಂಸ್ಥೆಗಳ ಮುಖಂಡರ ಜೊತೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಚರ್ಚೆ ನಡೆಸಿ ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಹೋರಾಟ ಮಾಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಇದು ಹಲವು ವರ್ಷಗಳಿಂದ ಮೂಲೆಗುಂಪಾಗಿದ್ದ ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆ ಮತ್ತೆ ಕೇಳಿ ಬರುತ್ತಿದೆ. ಕೊಡಗಿನ ವಿಚಾರದಲ್ಲಿ ಸರಕಾರ ಹಾಗೂ ಆಡಳಿತಾರೂಢ ಪಕ್ಷಗಳು ನಿರ್ಲಕ್ಷ್ಯ ತಾಳುವುದನ್ನು ನಿಲ್ಲಿಸದಿದ್ದಲ್ಲಿ ಈ ವಿಚಾರ ಹೋರಾಟಕ್ಕೆ ತಿರುಗುವ ಲಕ್ಷಣಗಳಿವೆ.
ರಾಜ್ಯವನ್ನಾಳಿದ ಸರಕಾರಗಳು ಕೊಡಗಿನ ಸಮಸ್ಯೆಗಳಿಗೆ ಸ್ಪಂದಿಸದಿರುವುದೇ ಪ್ರತ್ಯೇಕ ರಾಜ್ಯದ ಬೇಡಿಕೆ ಮರುಜೀವ ಪಡೆಯಲು ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲವಾದರೂ, ಈ ಬೇಡಿಕೆ ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಕೊಡಗಿನ ಜನರನ್ನು ಕಾಡತೊಡಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss