Tuesday, March 21, 2023

Latest Posts

ಜಮ್ಮು ಕಾಶ್ಮೀರದಲ್ಲಿ ವಾಟ್ಸಾಪ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾಟ್ಸಾಪ್ ಅನೇಕ ರೀತಿಯಲ್ಲಿ ಉಪಕಾರಿಯಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ವೈದ್ಯರು ವಾಟ್ಸಾಪ್ ಮೂಲಕವೇ ಹೆರಿಗೆ ಮಾಡಿಸಿದ ಸುದ್ದಿ ಸಖತ್ ವೈರಲ್ ಆಗಿದೆ.

ಜಮ್ಮು ಮತ್ತು ಕಾಶ್ಮೀರದ ಕೆರನ್ ಎಂಬಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮೊದಲೇ ಈ ಮಹಿಳೆಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಹೇಗಾದರೂ ಮಾಡಿ ಆಸ್ಪತ್ರೆಗೆ ಕರೆದೊಯ್ಯಲೇಬೇಕಾಗಿತ್ತು. ಆದರೆ, ನಿರಂತರ ಹಿಮಪಾತವಾಗುತ್ತಿರುವುದರಿಂದ ಏರ್ ಲಿಫ್ಟ್ ಕೂಡ ಸಾಧ್ಯವಾಗಲಿಲ್ಲ. ಆಗ ನೆರವಾಗಿದ್ದೇ ವಾಟ್ಸಾಪ್.

ತಜ್ಞ ವೈದ್ಯರೊಬ್ಬರು, ಸ್ಥಳೀಯ ವೈದ್ಯರಿಗೆ ವಾಟ್ಸಾಪ್ ಕಾಲ್ ಮೂಲಕ ಸರಿಯಾದ ಸಲಹೆ, ಸೂಚನೆಗಳನ್ನು ನೀಡಿ, ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ಕೆರನ್ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ದಾಖಲಾಗಿದ್ದರು. ಅವರು ಹೆರಿಗೆ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಸಿರು ನಂಜು(eclampsia), ದೀರ್ಘಕಾಲದ ಹೆರಿಗೆ, ಎಪಿಸಿಯೊಮಿಯೊಂದಿಗೆ ಸಂಕೀರ್ಣ ಹೆರಿಗೆಯ ಇತಿಹಾಸ ಹೊಂದಿದ್ದರು ಎಂದು ಕ್ರಾಲ್ಪೋರಾದ ಮಂಡಲ್ ವೈದ್ಯಕೀಯ ಅಧಿಕಾರಿ ಡಾ ಮೀರ್ ಮೊಹಮ್ಮದ್ ಶಫಿ ಹೇಳಿದರು.

ಚಳಿಗಾಲದ ಸಮಯದಲ್ಲಿ ಹಿಮಪಾತವಾಗುವುದರಿಂದ ಕೆರನ್ ಸಂಪೂರ್ಣವಾಗಿ ಹೊರ ಜಗತ್ತಿನ ಸಂಪರ್ಕ ಕಡೆದುಕೊಂಡಿತ್ತು. ಈ ವೇಳೆ ಏರ್‌ಲಿಫ್ಟ್ ಮಾಡುವುದು ಅನಿವಾರ್ಯಾವಾಗಿತ್ತು. ಆದರೆ, ಗುರುವಾರ ಮತ್ತು ಶುಕ್ರವಾರ ನಿರಂತರವಾಗಿ ಹಿಮಪಾತವಾಗುತ್ತಿದ್ದದ್ದರಿಂದ ಏರ್‌ಲಿಫ್ಟ್ ಮಾಡುವುದು ಅಸಾಧ್ಯವಾಯಿತು. ಇದರಿಂದಾಗಿ ಕೆರನ್ ಆರೋಗ್ಯ ಕೇಂದ್ರದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಲು ಪರ್ಯಾಯ ದಾರಿಯನ್ನು ಕಂಡುಕೊಳ್ಳುವುದು ಅನಿವಾರ್ಯವಾಯಿತು.

ಅಂತಿಮವಾಗಿ, ತಜ್ಞ ವೈದ್ಯರ ನೆರವಿನೊಂದಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಲು ನಿರ್ಧರಿಸಲಾಯಿತು. ಆಗ ನೆರವಿಗೆ ಬಂದಿದ್ದೇ ಕುಪ್ವಾರಾ ಉಪ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಪಾರ್ವಿಸ್. ವಾಟ್ಸಾಪ್ ಕಾಲ್ ಮೂಲಕ ಪಾರ್ವಿಸ್ ಅವರು, ಸ್ಥಳೀಯ ವೈದ್ಯರಾದ ಅರ್ಷಾದ್ ಶಫಿ ಮತ್ತು ಅವರ ಅರೆ ವೈದ್ಯಕೀಯ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದರು. ಹೆರಿಗೆ ನೋವು ಕಾಣಿಸಿಕೊಂಡ ಆರು ಗಂಟೆಗಳ ನಂತರ ಆರೋಗ್ಯವಂತ ಹೆಣ್ಣು ಮಗು ಜನಿಸಿತು. ಪ್ರಸ್ತುತ ಮಗು ಮತ್ತು ತಾಯಿ ಇಬ್ಬರೂ ವೈದ್ಯಕೀಯ ಕಣ್ಗಾವಲಿನಲ್ಲಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಡಾ. ಶಫಿ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!