Tuesday, March 21, 2023

Latest Posts

ಬೆಂಕಿ ನಂದಿಸಲು ಹೋಗಿ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾದ ರೈತ

ಹೊಸದಿಗಂತ ವರದಿ, ಮಂಡ್ಯ :

ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತನೋರ್ವ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹಾಲಿಂಗಯ್ಯ (60) ಎಂಬಾತನೇ ಸುಟ್ಟು ಕರಕಲಾದ ರೈತ. ಘಟನೆಯಿಂದಾಗಿ ಸುಮಾರು 20 ಎಕರೆಗೂ ಹೆಚ್ಚು ಪ್ರದೇಶದ ಕಬ್ಬು ಭಸ್ಮವಾಗಿದೆ.

ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಮೊಡಚಾಕನಹಳ್ಳಿ ಗ್ರಾಮದಲ್ಲಿರುವ ಮಹಾಲಿಂಗಯ್ಯ ಅವರು ಜಮೀನಿನ ಬಳಿ ಹೋಗಿದ್ದಾರೆ. ಈ ವೇಳೆ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಿಗೆ ಅವರಿಗೂ ತಗುಲಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.

ದಟ್ಟ ಹೊಗೆಯನ್ನು ನೋಡಿದ ಗ್ರಾಮಸ್ಥರು ತಕ್ಷಣ ಜಮೀನಿನ ಬಳಿಗೆ ಬಂದು ನೀರು, ಮಣ್ಣು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟೊತ್ತಿಗೆ ಸುಮಾರು 20 ಎಕರೆ ಪ್ರದೇಶದ ಕಬ್ಬಿಗೂ ಬೆಂಕಿ ವ್ಯಾಪಿಸಿದೆ.

ಗ್ರಾಮದ ಮಹೇಶ ಅವರಿಗೆ ಸೇರಿದ 8 ಎಕರೆ, ಜವರೇಗೌಡರ 1.5 ಎಕರೆ, ಪಾಪಣ್ಣ ಅವರ 2 ಂಕರೆ ಶಂಕರ್‌ರವರ 1 ಎಕರೆ ಕಬ್ಬು ಭಸ್ಮವಾಗಿದೆ. ಇದರೊಂದಿಗೆ ಮಹೇಶ್ ಎಂಬುವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ.

ಶಾಸಕ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರದಿಂದ 5 ಲಕ್ಷ ಪರಿಹಾರ ಹಾಗೂ ಕುಟುಂಬ ನಿರ್ವಹಣೆಗಾಗಿ ಎರಡು ಹಸುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಇತರರು ಭೇಟಿ ನೀಡಿ ಸಾಂತ್ವನ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!