ಹೊಸದಿಗಂತ ವರದಿ, ಬಳ್ಳಾರಿ:
ಸ್ವಾತಂತ್ರ್ಯ ಬಂದಾಗಿನಿಂದಲೂ ಹೆಚ್ಚು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಎಲ್ಲ ವರ್ಗದವರ ಜನರ ವಿಸ್ವಾಸವನ್ನು ಕಳೆದು ಕೊಂಡಿದ್ದು, ದೇಶದಲ್ಲೇ ಕಾಂಗ್ರೆಸ್ ಅಸ್ತಿತ್ವವನ್ನು ಕಳೆದುಕೊಂಡಿದ್ದು, ರಾಜ್ಯದಲ್ಲಿ ಅಲ್ಪಸ್ವಲ್ಪ ಜೀವ ಹಿಡಿದಿದೆ, ಅದೂ ಮುಂಬರುವ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ನಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಜನಪರ ಆಡಳಿತದ ಹೊಡೆತಕ್ಕೆ ಕಾಂಗ್ರೆಸ್ ಮುದ್ದೆಯಾಗಿ ಮಲಗಿಕೊಂಡಿದೆ, ಆದರೂ, ಅಧಿಕಾರ ಹೊಡಿಯಲಿದ್ದೇವೆ ಎಂದು ಹಗಲು ಕನಸು ಕಾಣುತ್ತಿದೆ, ರಾಜ್ಯ, ದೇಶದಲ್ಲಿ ಬಿಜೆಪಿ ಅಲೆಯಿದೆ, ರಾಜ್ಯದಲ್ಲಿ ಕೆಲ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಗೆ ತಕ್ಕ ಪಾಠ ಕಲಿಸಲು ರಾಜ್ಯದ ಜನರು ತುದಿಗಾಲ ಮೇಲೆ ನಿಂತಿದ್ದಾರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಷ್ಟೇ ತಿಪ್ಪರಲಾಗ್ ಹಾಕಿದರೂ ಅಧಿಕಾರಕ್ಕೆ ಬರೋಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾದೇಶಿಕ ಪಕ್ಷಗಳಿಂದ ಬಿಜೆಪಿಗೆ ರಾಗಿ ಕಾಳಿನಷ್ಟು ತೊಂದರೆಯಾಗೋಲ್ಲ, ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ಅವರು ಸ್ಥಾಪಿಸಿದ ಕೆಆರ್ ಪಿಪಿ ಪಕ್ಷದಿಂದ ಯಾರಿಗೂ ತೊಂದರೆಯಾಗೋಲ್ಲ, ರೆಡ್ಡಿ ವಿರುದ್ಧ ಗಂಗಾವತಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ, ಈ ಕುರಿತು ಹೆಚ್ಚು ಮಾತನಾಡೋಲ್ಲ, ಎಲ್ಲವೂ ವರೀಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಪಕ್ಷ ತೀರ್ಮಾನ ಮಾಡಿದರೇ ಖಂಡಿತ ಯಾವುದೇ ಕ್ಷೆತ್ರವಿರಲಿ ಸ್ಪರ್ಧೆಮಾಡುವೆ ಎಂದರು. ಕಾಂಗ್ರೆಸ್ ಪಕ್ಷದ ಸ್ಥಿತಿ ವಿಕ್ರಮ ಬೇತಾಳನ ಕಂಥೆಯಂತಾಗಿದೆ, ಬೇತಾಳ ಯಾರು ಎಂದು ಕೇಳುತ್ತಾರೆ, ಅದನ್ನುನಾನು ಹೇಳೊಲ್ಲ, ಹೇಳಿಯೂ ಇಲ್ಲ, ಕಾಂಗ್ರೆಸ್ ಪಕ್ಷದಲ್ಲೇ ವಿಕ್ರಮ ಬೇತಾಳದಂತೆ ಸಾಕಷ್ಟು ಜನರಿದ್ದಾರೆ, ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.