Sunday, March 26, 2023

Latest Posts

ನಗರೋತ್ಥಾನ ಯೋಜನೆಯಡಿ ಕಳಪೆ ಕಾಮಗಾರಿ: ಗುತ್ತಿಗೆದಾರನ ವಿರುದ್ಧ ಆಡಳಿತ ಮಂಡಳಿ ಆರೋಪ

ಹೊಸದಿಗಂತ ವರದಿ,ಸೋಮವಾರಪೇಟೆ:

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಬಹುತೇಕ ಕೆಲವು ವಾರ್ಡ್’ಗಳಲ್ಲಿ ಕಳಪೆ ಕಾಮಗಾರಿಯಾಗಿರುವ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರೇ ವಿರೋಧ‌ ವ್ಯಕ್ತಪಡಿಸಿದ್ದಾರೆ.
ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯಿತಿಗೆ ರೂ. 2.26 ಕೋಟಿ ಅನುದಾನ ಬಿಡುಗಡೆಯಾಗಿದ್ದು, ವಿವಿಧ ರಸ್ತೆಗಳ ಕಾಂಕ್ರಿಟೀಕರಣ, ಡಾಮರೀಕರಣ, ಚರಂಡಿ, ಮೋರಿ ನಿರ್ಮಾಣ ನಡೆಯುತ್ತಿದೆ. ಪ್ರಮುಖವಾಗಿ ಚರಂಡಿ ನಿರ್ಮಾಣದಲ್ಲಿ ಹೇಳಲಾರದಷ್ಟು ಕಳಪೆ ಕಾಮಗಾರಿ ಕಂಡುಬಂದಿದೆ.
ಹಾಸನದ ಮುಖ್ಯ ಗುತ್ತಿಗೆದಾರನ ಕೈಯಿಂದ ಕೈಗೆ ಬದಲಾಗಿ ಸೋಮವಾರಪೇಟೆಯ ಸಂದೀಪ್ ಎಂಬಾತ ನಡೆಸುತ್ತಿರುವ ಕಾಮಗಾರಿಗಳು ಕಳಪೆಯಾಗಿದ್ದು ಗುತ್ತಿಗೆದಾರನಿಗೆ ಇಷ್ಟ ಬಂದಂತೆ ನೆಡೆಯುತ್ತಿದೆ.ಈ ಕಾಮಗಾರಿಗಳು ಸಿದ್ಧವಾದ ಕೆಲವೇ ತಿಂಗಳಿನಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಶಾಸಕರು ಭೂಮಿಪೂಜೆ ನಡೆಸಿ ಎರಡು ತಿಂಗಳಾದರೂ ಆಗೊಮ್ಮೆ ಈಗೊಮ್ಮೆ ಕೆಲಸ ಮಾಡಲು ಬರುವ ಈ ಗುತ್ತಿಗೆದಾರ, ಇಲ್ಲಿನ ವಲ್ಲಭಬಾಯಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯಲ್ಲಿ ಎರಡು ಅಡಿ ಆಳದ ಚರಂಡಿ ನಿರ್ಮಾಣಕ್ಕೆ ಈತ ನೆಲ ಆಗೆದಿರುವುದು ಒಂದೂವರೆ ಅಡಿಯಷ್ಟು ಮಾತ್ರ. ಮೊದಲು 4 ಇಂಚು ಬೆಡ್ಡಿಂಗ್ ಹಾಕುವಲ್ಲಿ ಕೇವಲ ಒಂದೂವರೆ ಇಂಚಿನಷ್ಟು , 7 ಇಂಚಿಗ ಬದಲಾಗಿ 10 ಇಂಚಿಗೆ ಒಂದು ರಾಡ್ ಹಾಕುವ ಮೂಲಕ ಕಳಪೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ.
ಕಾಮಗಾರಿಗಳನ್ನು ಪರಿಶೀಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ ಕೆ ಚಂದ್ರು, ಸದಸ್ಯರಾದ ಎಸ್ ಮಹೇಶ್, ಮೋಹಿನಿ ಅವರುಗಳು, ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಾಗಿದೆ. ಈ ಬಗ್ಗೆ ಗುತ್ತಿಗೆದಾರನಿಗೆ ಸರಿಯಾಗಿ ಕಾಮಗಾರಿ ಮಾಡುವಂತೆ‌ ತಿಳಿಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಎಷ್ಟು ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಒಬ್ಬ ಬೇಜವಾಬ್ದಾರಿ ಗುತ್ತಿಗೆದಾರನಾಗಿದ್ದಾನೆ ಎನ್ನುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಕ್ವಾಲಿಟಿ ಇಂಜಿನಿಯರ್ ಸಂಭ್ರಮ್ ಕಾಮಗಾರಿಯನ್ನು ಪರಿಶೀಲಿಸಿದ್ದು, ಉತ್ತಮ ಗುಣಮಟ್ಟ ಕಂಡುಬಂದಿಲ್ಲ ಆದ್ದರಿಂದ ಕಾಮಗಾರಿ ನಿಲ್ಲಿಸಿ,ಹೊಸದಾಗಿ ಹಾಗೂ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಸೂಚಿಸಿದ್ದಾರೆ.
ಆದರೆ ಇದಕ್ಕೂ ಕ್ಯಾರೇ ಎನ್ನದ ಗುತ್ತಿಗೆದಾರ ರಾತ್ರೋ,ರಾತ್ರಿ ಕಾಂಕ್ರಿಟ್ ಹಾಕಿ ಪಟ್ಟಣ ಪಂಚಾಯ್ತಿಗೆ ಸಡ್ಡು ಹೊಡೆದಿದ್ದಾರೆ.
ರೇಂಜರ್ ಬ್ಲಾಕಿನಲ್ಲೂ ಕಾಂಕ್ರಿಟ್ ಹಾಕಿದ ಮಾರನೇ ದಿನವೇ ಸೇಂಟ್ರಿಂಗ್ ಬಿಚ್ಚಿದ್ದು, ಚರಂಡಿ ಈಗಲೇ ಬಿರುಕು ಬಿಟ್ಟಿದೆ. ನಗರೋತ್ಥಾನ ಯೋಜನೆ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯ್ತಿ ಅಸಹಾಯಕವಾಗಿದ್ದು, ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!