Saturday, December 9, 2023

Latest Posts

ಕೌಟುಂಬಿಕ ಕಲಹ-ಡೆತ್‌ನೋಟ್ ಬರೆದಿಟ್ಟು ಮಗುವಿನೊಂದಿಗೆ ಕೆರೆಗೆ ಹಾರಿದ ತಂದೆ

ಹೊಸದಿಗಂತ ವರದಿ, ನಾಗಮಂಗಲ:

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಮಗುವಿನೊಂದಿಗೆ ತಂದೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಪಿಟ್ಟೆಕೊಪ್ಪಲು ಗ್ರಾಮ ಸಮೀಪದ ಚನ್ನಾಪುರ ಕೆರೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಪಿಟ್ಟೆಕೊಪ್ಪಲು ಗ್ರಾಮದ ಲೇಟ್ ಬೋರೇಗೌಡರ ಮಗ ಗಂಗಾಧರಗೌಡ ಅಲಿಯಾಸ್ ಪಿ.ಬಿ.ಗಿರೀಶ(36) ಎಂಬಾತನೇ ತನ್ನ 6ವರ್ಷದ ಪುತ್ರ ಜಸ್ವಿತ್‌ನೊಂದಿಗೆ ಊರಿನ ಸಮೀಪದ ಚನ್ನಾಪುರ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ ತಂದೆ ಮಗ.
ನನ್ನ ಹಾಗೂ ನನ್ನ ಮಗನ ಸಾವಿಗೆ ಪತ್ನಿ ಸಿಂಧು ಹಾಗೂ ಎಲ್‌ಐಸಿ ಏಜೆಂಟ್ ಜಿ.ಸಿ.ನಂಜುಂಡೇಗೌಡ ಕಾರಣರಾಗಿದ್ದಾರೆ. ಇವರಿಬ್ಬರು ಕೊಟ್ಟಿರುವ ತೊಂದರೆಯನ್ನು ಹೇಳಲು ಕಷ್ಟವಾಗುತ್ತದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗಂಗಾಧರಗೌಡ ಬರೆದಿರುವ ಡತ್‌ನೋಟ್ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ.
ಕೆರೆಹತ್ತಿರ ಪತ್ನಿ ಸಿಂಧು ಹೈಡ್ರಾಮ : ಗಂಡ ಮಗ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಶುಕ್ರವಾರ ಬೆಳಿಗ್ಗೆ ಕೆರೆಯ ಹತ್ತಿರ ಬಿಂಡಿಗನವಿಲೆ ಠಾಣೆಯ ಪೊಲೀಸರು ಬರುತ್ತಿದ್ದಂತೆ ಹೈಡ್ರಾಮ ನಡೆಸಿದ ಪತ್ನಿ ಸಿಂಧು ನೋಡನೋಡುತ್ತಿದ್ದಂತೆ ಕೆರೆಗೆ ಹಾರಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಸಿಂಧುಳನ್ನು ರಕ್ಷಿಸಿದ್ದಾರೆ.
ನಂತರ ಸ್ಥಳಕ್ಕೆ ಧಾವಿಸಿದ ಪಟ್ಟಣದ ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಮೃತದೇಹಗಳ ಹುಡುಕಾಟ ನಡೆಸಿದ ವೇಳೆ ಮೊದಲು ಗಂಗಾಧರಗೌಡನ ಮೃತದೇಹ ಪತ್ತೆಯಾದರೆ, ಮುಂದುವರಿದ ಕಾರ್ಯಾಚರಣೆಯಲ್ಲಿ ಮಧ್ಯಾಹ್ನದ ವೇಳೆಗೆ ಮಗ ಜಸ್ವಿತ್‌ನ ಮೃತದೇಹ ಪತ್ತೆಯಾಯಿತು.
ಸಿಂಧು ಹಾಗೂ ಗರುಡಾಪುರ ಗ್ರಾಮದ ಎಲ್‌ಐಸಿ ಏಜೆಂಟ್ ಜಿ.ಸಿ.ನಂಜುಂಡೇಗೌಡನ ನಡುವೆ ಕೆಲವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಈ ವಿಚಾರವಾಗಿ ಗ್ರಾಮದ ಹಿರಿಯರು ಹಲವು ಬಾರಿ ರಾಜೀಸಂಧಾನದ ಮೂಲಕ ತಿಳುವಳಿಗೆ ನೀಡಿ ಎಚ್ಚರಿಸಿದ್ದರಾದರೂ ಇವರಿಬ್ಬರು ತಮ್ಮ ಚಾಳಿ ಬಿಟ್ಟಿರಲಿಲ್ಲ. ಇದರಿಂದ ಬೇಸತ್ತು ಮಗನೊಂದಿಗೆ ತಂದೆ ನೀರಿಗೆ ಬಿದ್ದು ಜೀವಕಳೆದುಕೊಂಡಿದ್ದಾರೆಂದು ಆರೋಪಿಸಿ ಗಂಗಾಧರಗೌಡನ ಸಹೋದರ ಬಿ.ಪಿ.ಮಂಜುನಾಥ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತಂದೆ ಮಗನ ಮೃತದೇಹಗಳು ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟುವಂತಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ತಂದೆ ಮಗನ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!