Thursday, February 2, 2023

Latest Posts

ಶತಮಾನದಷ್ಟು ಹಳೆಯದಾದ ಶಾಹಿ ಶೀರಾ ಪುನರುಜ್ಜೀವನಗೊಳಿಸಿದ ಕಾಶ್ಮೀರಿ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಷ್ಟಿಲ್ಲದೆ ಹೇಳ್ತಾರೆ ತಾಯಿಯೇ ಮೊದಲ ಗುರು ಅಂತ. ಇದು ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಲ್ಲ. ಬದುಕಿನ ಪ್ರತಿಯೊಂದು ಹೆಜ್ಜೆಯೂ ದಿಟ್ಟತನ, ಸಾಧನೆ ಹಾದಿಗಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ʻಅಮ್ಮʼ ಕಾರಣಕರ್ತಳು. ಚಿಕ್ಕ ವಯಸ್ಸಿನ ರುಹಾಬ್ ಲತೀಫ್ ಮಿರ್ ವಿಚಾರದಲ್ಲಿ ಆದದ್ದೂ ಅದೇ. ತನ್ನ ತಾಯಿ ರುಚಿಕರವಾದ ಮಾಡುವ ಕಾಶ್ಮೀರಿ ಪಾಕಪದ್ಧತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಈಕೆ ಇಂದು ದೇಶ ಮಾತ್ರವಲ್ಲದೆ, ವಿದೇಶದಲ್ಲಿಯೂ ಈ ಸಂಪ್ರದಾಯಿಕ ಪಾಕಪದ್ದತಿಯಲ್ಲಿ ಹೆಸರು ಪಡೆದಿದ್ದಾಳೆ. ಅಷ್ಟೆ ಅಲ್ಲ ಆಕೆಯ ತಾಯಿಯು ಪಾಕಪದ್ಧತಿಯ ಅಧಿಕೃತತೆ ಮತ್ತು ವೈವಿಧ್ಯತೆಯ ಬಗ್ಗೆ ಗೌರವದ ಭಾವನೆಯನ್ನು ಹುಟ್ಟುಹಾಕಿದೆ.

ಹೆಚ್ಚಾಗಿ ವಿದೇಶಿ ಪಾಕಪದ್ಧತಿಗಳಿಗೆ ನೀಡುತ್ತಿರುವ ಆದ್ಯತೆಯಿಂದ ಕಾಶ್ಮೀರಿ ಪಾಕಪದ್ಧತಿ ಕ್ರಮೇಣ ನಿಧಾನವಾಗಿ ಕಳೆದುಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ರುಹಾಬ್‌ ಅಧಿಕೃತ ಕಾಶ್ಮೀರಿ ಪಾಕಪದ್ಧತಿಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಪಣ ತೊಟ್ಟರು. ಕಳೆದ ಎರಡು ವರ್ಷಗಳ ಹಿಂದಷ್ಟೇ 2020 ರಲ್ಲಿ ತನ್ನ ವ್ಯವಹಾರವನ್ನು ಪ್ರಾರಂಭಿಸಿದ ಅವರು ಈಗ 100 ಕ್ಕೂ ಹೆಚ್ಚು ಮದುವೆಗಳಿಂದ ಆರ್ಡರ್‌ಗಳನ್ನು ಸ್ವೀಕರಿಸಿದ್ದಾರಂತೆ.

ಶಾಹಿ ಶೀರಾ ಮರುಶೋಧನೆ

ತನ್ನ ಸಿಗ್ನೇಚರ್ ಖಾದ್ಯವನ್ನು ಆಯ್ಕೆ ಮಾಡಲು ಬಂದಾಗ, ರುಹಾಬ್ ಟೇಸ್ಟಿ ಮತ್ತು ಆರೋಗ್ಯಕರ ಪಾನೀಯವಾದ ‘ಶಾಹಿ ಶೀರಾ’ ಮೇಲೆ ತನ್ನ ಗಮನ ಕೇಂದ್ರೀಕರಿಸಿದಳು. ಇದಕ್ಕೆ ಕಾರಣ, ಕಾಶ್ಮೀರಿ ಪಾಕಪದ್ಧತಿಯಿಂದ ಬಹುತೇಕ ಸಂಪೂರ್ಣವಾಗಿ ಅಳಿದು ಹೋದ ಅಂಶ ಇದು. ಪಾನೀಯವನ್ನು ವಿವಿಧ ಹಣ್ಣುಗಳ ರಸವನ್ನು ಹೊರತೆಗೆಯುವ ಮೂಲಕ ತಯಾರಿಸಲಾಗುತ್ತದೆ.

ಪಾಕವಿಧಾನವನ್ನು ಅವರ ಮುತ್ತಜ್ಜಿಯಿಂದ ಕುಟುಂಬದ ಪರಂಪರೆಯಾಗಿ ರವಾನಿಸಲಾಗಿದೆ. ಇದು 100 ವರ್ಷಗಳಷ್ಟು ಹಳೆಯದು ಎಂದು ಹೆಮ್ಮೆಯಿಂದ ಹೇಳುತ್ತಾರೆ ರುಹಾಬ್. ರಂಜಾನ್ ಸಮಯದಲ್ಲಿ ನಮ್ಮ ಮನೆಯಲ್ಲಿ ತಯಾರಿಸಲಾಗುತ್ತದೆ. ಇದು ತುಂಬಾ ರುಚಿಕರ ಹಾಗೂ ಇನೂ ಬೇಕೆನಿಸುವಷ್ಟು ಆಹ್ಲಾದಕರ. ಈ ಪಾನೀಯ ಸಿದ್ಧವಾಗಲು 24 ಗಂಟೆಗಳಿಗಿಂತ ಹೆಚ್ಚು ಸಮಯ ಅಗತ್ಯ. ಅಷ್ಟೇ ಅಲ್ಲದೆ ಆರೋಗ್ಯಕರವಾಗಿಯೂ ಬಹಳ ಪ್ರಯೋಜನ ಹೊಂದಿರುವ ಈ ಪಾನೀಯ ರಕ್ತ ಶುದ್ಧೀಕರಿಸಲು, ಚರ್ಮವನ್ನು ಕಾಂತಿಯುತಗೊಳಿಸಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

ಕಾಲೇಜು ದಿನಗಳಲ್ಲಿ ನಡೆದ ಫುಡ್ ಫೆಸ್ಟಿವಲ್ ನಲ್ಲಿ ಮೊದಲು ಸ್ಟಾಲ್ ಹಾಕಿ ಶಾಹಿ ಶೀರಾ ಬಡಿಸಲು ನಿರ್ಧರಿಸಿದ್ದ ರುಹಾಬ್. ಈ ಅಧಿಕೃತ ಖಾದ್ಯವನ್ನು ಕಾಶ್ಮೀರಿ ಜನರಿಗೆ ಪರಿಚಯಿಸಲು ಬಯಸಿದಳು ಜೊತೆಗೆ ಪೂರ್ವಜರ ಸಂಪ್ರದಾಯಗಳ ಬಗ್ಗೆ ಶಿಕ್ಷಣ ಕೊಟ್ಟು ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ಉತ್ಸುಕಳಾಗಿದ್ದಳು. ಆ ರಾತ್ರಿ ಅವಳು ತನ್ನ ಶಾಹಿ ಶೀರಾವನ್ನು 500 ಕ್ಕೂ ಹೆಚ್ಚು ಜನರಿಗೆ ಮಾರಾಟ ಮಾಡಿ ಇದೇ ಮೊದಲ ಮೆಟ್ಟಿಲಾಗಿತ್ತು. ನಂತರ 2019 ರಲ್ಲಿ ಕಾಶ್ಮೀರ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಪಾನೀಯ ನೀಡಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದರು. ಇದು ಶಾಹಿಯನ್ನು ಮಾರುಕಟ್ಟೆಗೆ ಕರೆದೊಯ್ಯುವಂತೆ ಪ್ರೇರೇಪಿಸಿತು.

ವಕೀಲಿ ವೃತ್ತಿ ಮಾಡುತ್ತಿದ್ದ ಇವರಿಗೆ ಸವಾಲುಗಳೇನು ಕಡಿಮೆಯಿರಲಿಲ್ಲ. ರುಹಾಬ್ ತನ್ನ ಸೋದರಸಂಬಂಧಿಯ ಮದುವೆಯಲ್ಲಿ ಪಾನೀಯ ಬಡಿಸಿ. 10,000 ರೂಪಾಯಿಗಳ ವೈಯಕ್ತಿಕ ಹೂಡಿಕೆಯೊಂದಿಗೆ ವ್ಯಾಪಾರವನ್ನು ಸ್ಥಾಪಿಸಿದರು. ಆ ಮದುವೆಯಲ್ಲಿ ಪಾನೀಯ ಹಿಟ್ ಆಗಿ ಈವೆಂಟ್ ಮ್ಯಾನೇಜರ್‌ಗಳು ಇತರ ಕಾರ್ಯಕ್ರಮಗಳಿಗಾಗಿ ಸುಮಾರು 1,000 ಬಾಟಲಿಗಳನ್ನು ಆರ್ಡರ್ ಮಾಡಿದರು. ಈ ಬಗ್ಗೆ ಬಾಯಿ ಮಾತಿನ ಮೂಲಕ ಹರಡಲು ಪ್ರಾರಂಭಿಸಿ 2021 ರ ಹೊತ್ತಿಗೆ ಅವರು ಕಾಶ್ಮೀರದಾದ್ಯಂತ 100 ಕ್ಕೂ ಹೆಚ್ಚು ಮದುವೆಗಳಿಗೆ ಈ ಪಾನೀಯವನ್ನು ಒದಗಿಸಿದರು.

ಉತ್ಪನ್ನದ ಗುಣಮಟ್ಟ ಮತ್ತು ಆರೋಗ್ಯ ಪ್ರಯೋಜನಗಳು ಮತ್ತು ಯಾವುದೇ ಸಂರಕ್ಷಕಗಳು ಅಥವಾ ಸಕ್ಕರೆ ಇಲ್ಲದಿರುವ ಕಾರಣ, ರುಹಾಬ್ ಪಾನೀಯಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. “ಈಗ ಪಾನೀಯವನ್ನು ಗರ್ಭಿಣಿಯರು ಅಥವಾ ಗೃಹೋಪಯೋಗಿ/ಸ್ವಾಗತ ಉಡುಗೊರೆಯಾಗಿ ಖರೀದಿಸುತ್ತಾರೆ”.

ರುಹಾಬ್ ಶಾಹಿ ಶೀರಾವನ್ನು ನಾಲ್ಕು ಸುವಾಸನೆಗಳಲ್ಲಿ ತಯಾರಿಸುತ್ತಾರೆ – ಏಪ್ರಿಕಾಟ್, ರೆಡ್ ಬೆರ್ರಿ, ಬ್ಲ್ಯಾಕ್‌ಬೆರಿ ಮತ್ತು ಮಿಶ್ರ ಬೆರ್ರಿ, ಆದರೆ ಇದುವರೆಗೆ ಮಾರುಕಟ್ಟೆಯಲ್ಲಿ ಮೊದಲ ಎರಡನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಪ್ರತಿ ಬಾಟಲಿಯು 200 ಮಿಲಿ ಪಾನೀಯವನ್ನು ಹೊಂದಿದೆ ಮತ್ತು ಪ್ರತಿ ಬಾಟಲಿಯ ಬೆಲೆ 110 ರೂ. ಪಾನೀಯವನ್ನು ತಯಾರಿಸಲು, ಬಾಟಲಿಗಳನ್ನು ತುಂಬಲು, ಉತ್ಪನ್ನವನ್ನು ಸಿದ್ಧಪಡಿಸಲು ಮತ್ತು ಅದನ್ನು ಗ್ರಾಹಕರಿಗೆ ತಲುಪಿಸಲು ತನ್ನ ಸಂಸ್ಕರಣಾ ಘಟಕದಲ್ಲಿ ಇತರ ಐದು ಜನರನ್ನು ನೇಮಿಸಿಕೊಂಡಿದ್ದಾಳೆ.

ಈಗ ದುಬೈ ಮತ್ತು ಕುವೈತ್‌ನವರೆಗಿನ ಗ್ರಾಹಕರಿಂದ ಸಾವಿರಾರು ಬಾಟಲಿಗಳ ಶಾಹಿ ಶೀರಾಕ್ಕಾಗಿ  ಆರ್ಡರ್‌ ಬರುತ್ತಿವೆ. ಆದರೆ ಸೀಮಿತ ಮೂಲ ಸೌಕರ್ಯ ಇರುವುದರಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ ಅಂತಿದಾರೆ ರುಹಾಬ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!