ಹೊಸದಿಗಂತ ಡಿಜಿಟಲ್ ಡೆಸ್ಕ್;
ಛತ್ತೀಸ್‌ಗಢದ ನಕ್ಸಲ್ ದಂಪತಿ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ನಾರಾಯಣಪುರ ಪೊಲೀಸರಿಗೆ ಶರಣಾಗಿದ್ದಾರೆ.
ದೋಸೆಲ್ ಸಲಾಂ ಅಲಿಯಾಸ್ ಸೋನ್ವಾ ತನ್ನ ಪತ್ನಿ ಆರತಿ ಸಲಾಂ ಕೊಡ್ಲಿಯಾರ್ ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುಡಿಯಾ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಶಾಂತ್ ದೇವಾಂಗನ್ ಅವರ ಮುಂದೆ ಗುರುವಾರ ಶರಣಾದರು.
ಈ ನಕ್ಸಲ್ ದಂಪತಿಯ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಈ ಹಿಂದೆ ಘೋಷಣೆ ಮಾಡಲಾಗಿತ್ತು. ಛತ್ತೀಸ್‌ಗಢದ ನಾರಾಯಣಪುರದಲ್ಲಿ ಇಬ್ಬರು ಶಸ್ತ್ರಾಸ್ತ್ರಗಳಿಲ್ಲದೇ ಪೊಲೀಸರ ಮುಂದೆ ಶರಣಾಗಿದ್ದಾರೆ. ನಕ್ಸಲರದ್ದು ಈಗ ಪೊಳ್ಳು ಸಿದ್ಧಾಂತ ಎಂದು ಅರಿತ ಈ ಜೋಡಿ, ತಾವು ಇನ್ಮುಂದೆ ಸಮಾಜದ ಮುಖ್ಯವಾಹಿನಿಗೆ ಸೇರುವುದಾಗಿಯೂ ತಮ್ಮ ಮುಂದೆ ಪ್ರತಿಜ್ಞೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋನ್ವಾ ನಕ್ಸಲ್ ಕಮಾಂಡರ್ ಆಗಿ ಕಳೆದ 13 ವರ್ಷಗಳಿಂದ ಸಪ್ಲೈ ಟೀಂ ಕಮಾಂಡರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪತ್ನಿ ಆರತಿ ಕೊಡಲಿಯಾರ್ ಜನತಾನ ಸರ್ಕಾರಿ ಶಾಲಾ ವಿಭಾಗದಲ್ಲಿ ಕಳೆದ 9 ವರ್ಷಗಳಿಂದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರು ಐನ್ಮೆಟಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಗ್ರಾಮದ ನಿವಾಸಿಗಳಾಗಿದ್ದು, ಶರಣಾದ ನಕ್ಸಲ್ ದಂಪತಿಗೆ ಸರ್ಕಾರದ ನಕ್ಸಲ್ ನಿರ್ಮೂಲನಾ ನೀತಿಯಡಿ ಪ್ರೋತ್ಸಾಹಧನವಾಗಿ ತಲಾ 25 ಸಾವಿರ ರೂ.ಗಳ ಚೆಕ್ ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.