ಕೃಷ್ಣಾ ಮೇಲ್ದಂಡೆ ರೈತರಿಗೆ ಸಂತಸದ ಸುದ್ದಿ: ಶೀಘ್ರದಲ್ಲೇ ಸವಳು-ಜವಳು ಸಮಸ್ಯೆಗೆ ಶಾಶ್ವತ ಪರಿಹಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯ ರೈತರಿಗೆ ತಲೆನೋವಾಗಿರುವ ಸವಳು -ಜವಳು ಸಮಸ್ಯೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಸಿಗಲಿದೆ ಎಂದು  ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌ ನಿರಾಣಿ ಹೇಳಿದ್ದಾರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಗುರುವಾರ ಎಫ್‌ಐಸಿಸಿಐ ಆಯೋಜಿಸಿದ್ದ ‘ಅಗ್ರಿ ಮ್ಯಾಕ್ 2022’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ಸವಳು-ಜವಳು ಸಮಸ್ಯೆಯಿಂದ ವರ್ಷದಿಂದ ವರ್ಷಕ್ಕೆ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಕ್ಯಾನ್ಸರ್‌ನಂತೆ ರೈತರನ್ನು ಎಡೆಬಿಡದೇ ಕಾಡುತ್ತಿರುವ ಈ ವಿಚಾರವಾಗಿ ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣ ಆಯೋಜಿಸಲಾಗಿದೆ,” ಎಂದು ತಿಳಿಸಿದರು.

ಪ್ರತಿ ವರ್ಷ ನೀರಾವರಿ ಪ್ರದೇಶ ಹೆಚ್ಚುತ್ತಿರುವಂತೆ ಸವಳು-ಜವಳು ಸಮಸ್ಯೆಯ ತೀವ್ರತೆಯೂ ಹೆಚ್ಚುತ್ತಿದೆ. ಪರಿಣಾಮವಾಗಿ, ಫಲವತ್ತಾದ ಭೂಮಿ ಇದ್ದರೂ ಅದರಲ್ಲಿ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಬಗ್ಗೆ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೈತರಿಗೆ ಕಾರ್ಯಕ್ರಮದಲ್ಲಿ ಉಪಯುಕ್ತ ಮಾಹಿತಿ ದೊರೆತಿದ್ದು, ಮುಂಬರುವ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲ್ಲಿದ್ದಾರೆ ಎಂದರು.

ಎಥನಾಲ್ ಉತ್ಪಾದನೆಯಲ್ಲಿ ನಾವೇ ಮೊದಲು

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ವಿವರಿಸಿದ ಸಚಿವರು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ಎಥನಾಲ್ ಉತ್ಪಾದನೆ ಹೆಚ್ಚಳ ಮಾಡಬೇಕು ಎಂಬ ಪ್ರಧಾನಿ ಅವರ ಕರೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ವಿಶೇಷ ಒಲವು ತೋರಿದ್ದು ಇನ್ನೊಂದು ವರ್ಷದಲ್ಲಿ ಕರ್ನಾಟಕ ದೇಶದಲ್ಲೇ ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಸಚಿವ ನಿರಾಣಿ ವಿವರಿಸಿದರು.

ಕೇಂದ್ರ ಸರ್ಕಾರವು ಪೆಟ್ರೋಲ್, ಡಿಸೇಲ್‍ನೊಂದಿಗೆ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡಲು ಕರೆ ಕೊಟ್ಟಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ, ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 5,850 ಕೋಟಿ ರೂಪಾಯಿ ಹೂಡಿಕೆ ಆಗಿದೆ. ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!