Wednesday, March 29, 2023

Latest Posts

ಫೋನ್ ಪೇ, ಗೂಗಲ್ ಪೇ ಬಳಸಿ ಲಕ್ಷಾಂತರ ರೂ. ವಂಚನೆ: ಆರೋಪಿ ಸೆರೆ

ಹೊಸದಿಗಂತ ವರದಿ ಮಡಿಕೇರಿ :

ಬೇರೊಬ್ಬರ ಮೊಬೈಲ್ ನಿಂದ ಫೋನ್ ಪೇ ಮತ್ತು ಗೂಗಲ್ ಪೇ ಬಳಸಿ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಡ್ರಾ ಮಾಡಿದ ವ್ಯಕ್ತಿಯೊಬ್ಬನನ್ನು ಸೆನ್ ಅಪರಾಧ ಪೊಲೀಸ್‌ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಗುಡ್ಡೆಹೊಸೂರಿನ ಬೊಳ್ಳೂರು ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಎಂಬವರ ಪುತ್ರ ಬಿ.ಎಂ.ನೂತನ್ (23) ಬಂಧಿತ ಆರೋಪಿ.

ಕುಶಾಲನಗರದ ಗುಮ್ಮನಕೊಲ್ಲಿಯ ನಿವಾಸಿ ಫಿರ್ಯಾದಿಯವರಾದ ಅನುಷಾ ಎಂಬವರ ತಂದೆ ಗುಮ್ಮನಕೊಲ್ಲಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದು, ಅವರ ಅರಿವಿಗೆ ಬಾರದಂತೆ ಅವರಿಗೆ ಸೇರಿದ ಮೊಬೈಲ್‌ನಿಂದ ಫೋನ್ ಪೇ ಮತ್ತು ಗೂಗಲ್ ಪೇ ಆಪ್ ಬಳಸಿ ಅವರ ಬ್ಯಾಂಕ್ ಖಾತೆಯಿಂದ ಕಳೆದ ಅಕ್ಟೋಬರ್ 28 ರಿಂದ ಪ್ರಸಕ್ತ ಸಾಲಿನ ಜ.25ರ ವರೆಗೆ ಹಂತಹಂತವಾಗಿ ಸುಮಾರು 4,76,456ರೂ. ಗಳನ್ನು ಬೇರೆಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು.

ಈ ಕುರಿತು ಅನುಷಾ ಅವರು ನೀಡಿದ ದೂರಿನ ಅನ್ವಯ ಕಲಂ: 66 (ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು 420 ಐ.ಪಿ.ಸಿ. ಯಂತೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡಿದ್ದರು.

ನಂತರ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷ ಜೆ.ಕೆ. ರಾಘವೇಂದ್ರ ಹಾಗೂ ಪೊಲೀಸ್ ಉಪ ನಿರೀಕ್ಷಕ ಹೆಚ್.ಇ. ದೇವರಾಜ್ ಮತ್ತು ಸಿಬ್ಬಂದಿಯವರು ಕ್ರಮ ಕೈಗೊಂಡು ಆರೋಪಿ ನೂತನ್ ನನ್ನು ಗುರುವಾರ ಬಂಧಿಸಿದ್ದಾರೆ.

ಅಲ್ಲದೆ‌ ಸಾರ್ವಜನಿಕರು ಸೈಬರ್ ಅಪರಾಧಗಳ ಬಗ್ಗೆ ಎಚ್ಚರದಿಂದ ಇರುವಂತೆ ಕೊಡಗು ಜಿಲ್ಲಾ ಸೈಬರ್ ಅಪರಾಧ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!