September 30, 2026
Wednesday, September 30, 2026
spot_img

ಪೊಲೀಸರ ಮೇಲೆ ಹ*ಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ರೌಡಿಗೆ ಬಿತ್ತು ಗುಂಡು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈಲಿನಿಂದ ಬಿಡುಗಡೆಯಾದ ಮರುದಿನವೇ ತನ್ನ ಹಳೆ ಚಾಳಿ ಮುಂದುವರಿಸಲು ಹೋದ ರೌಡಿಶೀಟರ್ ಒಬ್ಬನಿಗೆ ಭದ್ರಾವತಿ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ‘ಡಿಚ್ಚಿ’ ಮುಬಾರಕ್ ಗುಂಡೇಟು ತಿಂದ ಆರೋಪಿ.

ಕಳೆದ ಶುಕ್ರವಾರವಷ್ಟೇ (ಫೆ.6) ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ ಹೊರಬಂದಿದ್ದ ಮುಬಾರಕ್, ಶನಿವಾರ (ಫೆ.7) ತನ್ನ 7-8 ಮಂದಿ ಸಂಗಡಿಗರೊಂದಿಗೆ ಗೌರಪುರದ ಬಳಿ ಡಕಾಯಿತಿಗೆ ಪ್ಲಾನ್ ಹಾಕಿದ್ದ. ಕಾರು ಮತ್ತು ಸ್ಕೂಟರ್‌ಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು.

ಕಾರ್ಯಾಚರಣೆ ವೇಳೆ ಪೊಲೀಸರು ಶರಣಾಗುವಂತೆ ಸೂಚಿಸಿದರೂ ಕೇಳದ ಮುಬಾರಕ್ ಅಂಡ್ ಟೀಮ್, ಕಲ್ಲು ಮತ್ತು ಚಾಕುಗಳಿಂದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಹೊಸಮನೆ ಪಿಎಸ್ಐ ಸಿದ್ದಪ್ಪ ಎಂ.ಪಿ. ಅವರ ಕಾಲಿನ ಮೂಳೆ ಮುರಿತವಾಗಿದ್ದು, ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಪೇಪರ್ ಟೌನ್ ಪಿಎಸ್ಐ ಕೃಷ್ಣಕುಮಾರ್ ಅವರ ಕೈಬೆರಳು ಮುರಿತವಾಗಿದೆ. ಸಿಬ್ಬಂದಿ ಆದರ್ಶ್ ಅವರ ಕಾಲಿಗೂ ಗಾಯವಾಗಿದೆ.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಮತ್ತು ಸಿಬ್ಬಂದಿಯ ಪ್ರಾಣ ರಕ್ಷಣೆಗಾಗಿ ಪಿಎಸ್ಐ ಕೃಷ್ಣಕುಮಾರ್ ಮಾನೆ ಅವರು ರೌಡಿಶೀಟರ್ ಮುಬಾರಕ್‌ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಮುಬಾರಕ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿವೈಎಸ್‌ಪಿ ನೇತೃತ್ವದ ಈ ತಂಡದಲ್ಲಿ ಪಿಎಸ್ಐಗಳಾದ ಸಿದ್ದಪ್ಪ, ಕೃಷ್ಣಕುಮಾರ್, ರಮೇಶ್ ಹಾಗೂ ಸಿಬ್ಬಂದಿಗಳಾದ ವೆಂಕಟೇಶ್, ಆದರ್ಶ್ ಸೇರಿದಂತೆ ಒಟ್ಟು 11 ಮಂದಿ ಸಾಹಸಮಯ ಕಾರ್ಯಾಚರಣೆ ನಡೆಸಿದ್ದರು.

Must Read