Monday, March 27, 2023

Latest Posts

ಬಾನಂಗಳದಲ್ಲಿ ಇನ್ಮುಂದೆ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಮಿನುಗಲಿದೆ ನಕ್ಷತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚಿಗಷ್ಟೆ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿ ಕೊಂಡಿದ್ದು, ಈ ಖುಷಿಯ ನಡುವೆ ಮತ್ತೊಂದು ಖುಷಿ  ಸಿಕ್ಕಿದೆ. ಆಕಾಶದಲ್ಲಿನ ನಕ್ಷತ್ರವೊಂದಕ್ಕೆ ಪುನೀತ್ ರಾಜ್ ಹೆಸರನ್ನು ಇಡಲಾಗಿದೆ. ‘ದಿ ಬಿಗ್​ ಲಿಟ್ಲ್’ ಸಂಸ್ಥೆಯ ಈ ಕಾರ್ಯವನ್ನು ತಿಳಿಸಲು ವಿಶೇಷ ವಿಡಿಯೋ ಹಂಚಿಕೊಂಡಿದೆ. ಇದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್​ ರವಿಚಂದ್ರನ್ ಅವರು ಧ್ವನಿ ನೀಡಿದ್ದಾರೆ.

ಬಿಗ್ ಲಿಟ್ಲ್ ಕಂಪನಿ ಬಿಡುಗಡೆ ಮಾಡಿರುವ ಅಪ್ಪುಗೆ ಗೌರವ ಸಲ್ಲಿಸುವ ಈ ವೀಡಿಯೋ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಖತ್ ವೈರಲ್ ಆಗಿದೆ.

ಆಕಾಶದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿವೆ. ಅವುಗಳಲ್ಲಿ ಒಂದು ತಾರೆಗೆ ಅಧಿಕೃತವಾಗಿ ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಇಡಲಾಗಿದೆ. ಹೆಸರು ರಿಜಿಸ್ಟರ್​ ಮಾಡಿಸಿರುವ ಪ್ರಮಾಣಪತ್ರವನ್ನು ‘ದಿ ಬಿಗ್​ ಲಿಟ್ಲ್​’ ಸಂಸ್ಥೆ ಹಂಚಿಕೊಂಡಿದೆ. ಆ ಮೂಲಕ ಪುನೀತ್ ರಾಜ್​ಕುಮಾರ್​ ಅವರಿಗೆ ಗೌರವ ಸಲ್ಲಿಸಲಾಗಿದೆ.

ನಮ್ಮ ಕಾಲದ ಅತ್ಯುತ್ತಮ ಸ್ಫೂರ್ತಿಗೆ ಒಂದು ಚಿಕ್ಕ ಗೌರವ ನೀಡುವ ಸಲುವಾಗಿ ಆಕಾಶದಲ್ಲಿರುವ ನಕ್ಷತ್ರವೊಂದಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಹೆಮ್ಮೆಯಾಗಿದೆ ಎಂದು ಬಿಗ್ ಲಿಟ್ಲ್ ಕಂಪನಿ ತಿಳಿಸಿದೆ. ಇನ್ನೂ ವಿಕ್ರಮ್ ರವಿಚಂದ್ರನ್ ಮಾತನಾಡಿ, ‘ಪುನೀತ್ ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತೆ. ನಾನು ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಸಿನಿಮಾದ ಆಚೆಗಿನ ಅವರ ಜೀವನ ಜಗತ್ತಿಗೇ ಸ್ಪೂರ್ತಿ. ಅವರಿಗಾಗಿ ಮಾಡುತ್ತಿರುವ ಒಂದೊಳ್ಳೆ ಕೆಲಸದಲ್ಲಿ ನಾನು ಭಾಗಿಯಾಗಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

https://www.instagram.com/p/Cp5FNKZvb2b/?utm_source=ig_embed&ig_rid=7d54c6a9-610e-4f7f-9d8b-6f9062f51e88

‘ದಿ ಬಿಗ್​ ಲಿಟ್ಲ್​’ ಕಂಪನಿಯ ಸಂಸ್ಥಾಪಕಿ ಕಾವ್ಯ ಶಂಕರೇಗೌಡ , ‘ಪುನೀತ್ ರಾಜ್​ಕುಮಾರ್ ಅವರು ಎಲ್ಲರಿಗೂ ಸ್ಫೂರ್ತಿ. ನಮ್ಮ ಕಂಪನಿ ಕೂಡ ಅವರಿಂದ ತುಂಬ ಕಲಿತಿದೆ. ನನ್ನಂತಹ ಸಾಮಾನ್ಯ ವ್ಯಕ್ತಿಗಳು ಸೂಪರ್ ಸ್ಟಾರ್​ಗಳ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಅವರು ಬದಲಾಯಿಸಿದ್ದಾರೆ. ನಕ್ಷತ್ರಗಳು ನಮ್ಮ ಮಾರ್ಗದರ್ಶಿ ಶಕ್ತಿಯಾಗಿರುತ್ತವೆ. ಆ ಕಲ್ಪನೆಯಡಿ ನಾವು ಮಾಡಿರುವ ಕಾನ್ಸೆಪ್ಟ್ ಮೂಡಿಬಂದಿದೆ. ನಮ್ಮ ಆಪ್ತರು ನಿಧನರಾದಾಗ ನಕ್ಷತ್ರಗಳಾಗುತ್ತಾರೆ ಅಂತ ನಾವು ನಂಬಿದ್ದೇವೆ. ಅಪ್ಪು ನಮಗೆಲ್ಲ ಸ್ಟಾರ್ ಆಗಿದ್ದರು. ಅವರ ಹೆಸರಲ್ಲಿ ಒಂದು ನಕ್ಷತ್ರ ಇರಬೇಕೆಂದು ನಾವು ಬಯಸುತ್ತೇವೆ. ನಮ್ಮೆಲ್ಲರ ಅತ್ಯುತ್ತಮ ಸ್ಫೂರ್ತಿಯ ಶಕ್ತಿಗೆ ಇದು ನಮ್ಮ ಚಿಕ್ಕ ಕೊಡುಗೆ’ ಎಂದು
ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!