ಶೌರ್ಯನಲ್ಲದ ಕ್ರೂರಿಯಾದ ಕನ್ನಡ ದ್ರೋಹಿ ಟಿಪ್ಪುವಿನ ಪ್ರತಿಮೆಯನ್ನಾಕೆ ನಿರ್ಮಿಸಬೇಕು: ಎಸ್.ಎಲ್.ಭೈರಪ್ಪ ಪ್ರಶ್ನೆ

ಹೊಸದಿಗಂತ ವರದಿ,ಮೈಸೂರು:

ಶೌರ್ಯನಲ್ಲದ ಕ್ರೂರಿಯಾದ ಕನ್ನಡ ದ್ರೋಹಿ ಟಿಪ್ಪುವಿನ ಪ್ರತಿಮೆಯನ್ನಾಕೆ ನಿರ್ಮಿಸಬೇಕು ಎಂದು ಖ್ಯಾತ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದರು.

ಭಾನುವಾರ ಸಂಜೆ ನಗರದ ರಂಗಾಯಣದಲ್ಲಿರುವ ಭೂಮಿ ಗೀತದಲ್ಲಿ ನಡೆದ ರಂಗಾಯಣದ ನಿದೇರ್ಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಬರೆದಿರುವ ಟಿಪ್ಪುವಿನ ನಿಜಸ್ವರೂಪ ಕುರಿತ ನಾಟಕ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಟಿಪ್ಪು ಕನ್ನಡಕ್ಕೆ ದ್ರೋಹ ಬಗೆದಿದ್ದು ವಾಸ್ತವಾಂಶ. ಆತ ಪ್ರತಿ ಊರಿನ ಹೆಸರನ್ನು ಬದಲಾಯಿಸಿದ್ದ. ಆ ಮೂಲಕ ಆ ಊರಿನ ಸಂಸ್ಕೃತಿ, ಪರಂಪರೆಯನ್ನೇ, ನಂಬಿಕೆ, ಇತಿಹಾಸವನ್ನೇ ಬದಲಾಯಿಸಿ, ಹೊಸ ಸಂಸ್ಕೃತಿಯನ್ನು ಹೇರಲು ಹೊರಟಿದ್ದ. ಇಸ್ಲಾಮೀಕರಣ ಮಾಡಲು ಹೊರಟಿದ್ದ. ಆ ಮೂಲಕ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಲು ಯತ್ನಿಸಿದ್ದ. ಅಲ್ಲದೇ ಕಂದಾಯ ಇಲಾಖೆಯ ಆಡಳಿತದಲ್ಲಿ ಪರ್ಷಿಯನ್ ಭಾಷೆಯ ಬಳಕೆಯನ್ನು ಜಾರಿಗೆ ತಂದಿದ್ದ. ಈಗಲೂ ಕೂಡ ಕಂದಾಯ ಇಲಾಖೆಯಲ್ಲಿ ಪರ್ಷಿಯನ್ ಭಾಷೆಯ ಪದಗಳೇ ಬಳಕೆಯಲ್ಲಿವೆ. ಹೀಗಾಗಿ ಟಿಪ್ಪು ಅದ್ಹೇಗೆ ಕನ್ನಡ ಕುವರ ಆದ ಎಂದು ಟಿಪ್ಪು ಕನ್ನಡ ಕುವರ ಎಂದು ಹೇಳುತ್ತಿರುವವರನ್ನು ಪ್ರಶ್ನಿಸಿದರು.

ಟಿಪ್ಪು ಸ್ವಭಾವತ ತುಂಬಾ ಕ್ರೂರಿ, ಆತ ಶೌರ್ಯನಲ್ಲ, ವೀರನೂ ಅಲ್ಲ, ಧರ್ಮ ಸಹಿಷ್ಣು ಆಗಿರಲಿಲ್ಲ. ರಾಷ್ಟ್ರೀಯತ, ರಾಷ್ಟ್ರ ಪ್ರೇಮ ಆತನಲ್ಲಿ ಇರಲಿಲ್ಲ, ಅನ್ಯ ಧರ್ಮದವರ ಮೇಲೆ ಕ್ರೌರ್ಯ ನಡೆಸುತ್ತಿದ್ದ, ಕೊಲೆಗಳನ್ನು ಮಾಡುತ್ತಿದ್ದ. ಆತ ಏನು ಮಹಾ ಸಾಧನೆ ಮಾಡಿದ್ದಾನೆ ಎಂದು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಆತನ ನೂರಡಿ ಪ್ರತಿಮೆಯನ್ನು ನಿರ್ಮಿಸುತ್ತೀರಿ. ಕೆಂಪೇಗೌಡರೊoದಿಗೆ ಟಿಪ್ಪು ಹೋಲಿಕೆ ಮಾಡುವುದು ಸರಿಯಲ್ಲ. ಕೆಂಪೇಗೌಡರು ಧರ್ಮ ಸಹಿಷ್ಣುತೆಯುಳ್ಳವರು. ಶೂರರು, ಇಡೀ ಬೆಂಗಳೂರನ್ನು ಪಕ್ಕಾ ಪ್ಲಾನ್‌ನೊಂದಿಗೆ ನಿರ್ಮಿಸಿದವರು. ಎಲ್ಲರಿಗೂ ಬದಕು ಕಟ್ಟಿಕೊಟ್ಟವರು. ಜನರಿಗೆ ಕುಡಿಯುವ ನೀರು ಪೂರೈಸಲೆಂದು ಕೆರೆಗಳನ್ನು ನಿರ್ಮಿಸಿದವರು. ಹೀಗೆ ಅನೇಕ ಕೊಡುಗೆಗಳನ್ನು ಜನರಿಗೆ ನೀಡಿದ್ದಾರೆ. ಆದರೆ ಟಿಪ್ಪು ಏನು ನೀಡಿದ್ದಾನೆ ಎಂದು ಆತನ ಪ್ರತಿಮೆಯನ್ನು ನಿರ್ಮಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಸಂವಿಧಾನವನ್ನು ಬರೆದ ಡಾ.ಬಿ.ಆರ್.ಅಂಬೇಡ್ಕರ್ ಅವರು, ಮುಸ್ಲೀಮರು ಪಾಕಿಸ್ತಾನವನ್ನು ಕೇಳುತ್ತಿದ್ದಾಗ, ಅವರು ನಮ್ಮ ದೇಶಕ್ಕೆ ಹೊಂದಿಕೊಳ್ಳುವುದಿಲ್ಲ, ಭಾರತದ ಮಾನಸಿಕತೆಯನ್ನು ಅವರು ಹೊಂದಿಲ್ಲ ಎಂದು ಹೇಳಿ, ಪಾಕಿಸ್ತಾನವನ್ನು ಅವರಿಗೆ ಬಿಟ್ಟು ಕೊಡುವುದು ಸೂಕ್ತ ಎಂದು ತಿಳಿಸಿದ್ದರು. ಭಾರತಕ್ಕೆ ಸ್ವಾತಂತ್ರಕ್ಕೆ ಸಿಕ್ಕ ಬಳಿಕ ನಮ್ಮ ದೇಶದ ಮಾನಸಿಕತೆಗೆ ಮುಸ್ಲೀಮರು ಹೊಂದಿಕೊoಡು ಹೋಗುತ್ತಾರೆ ಎಂದು ಭಾವಿಸಿದ್ದೇವು. ಆದರೆ ಇಡೀ ದೇಶವನ್ನು ಇಸ್ಲಾಮೀಕರಣ ಮಾಡಲು, ಹರಿದು ಹಂಚಿಕೊಳ್ಳಲು ಸಂಚು ನಡೆಸಿದ್ದ ಟಿಪ್ಪುನನ್ನು ತಮ್ಮ ಹಿರೋ ಎಂದು ಒಪ್ಪಿಕೊಂಡು ಕೊಂಡಾಡುತ್ತಿರುವವರ, ಪ್ರತಿಮೆ ನಿರ್ಮಿಸಲು ಚಿಂತನೆ ನಡೆಸುತ್ತಿದ್ದಾರೆ. ರೈಲಿಗೆ ಇಟ್ಟಿದ್ದ ಟಿಪ್ಪುವಿನ ಹೆಸರನ್ನು ಬದಲಾಯಿಸಿ, ಅವರ ಧರ್ಮದವರೇ ಆದ ಎಪಿಜಿ ಅಬ್ದಲ್ ಕಲಾಂ ಅವರ ಹೆಸರನ್ನು ಇಡಲು ಹೊರಟರೆ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇಂತಹ ಮಾನಸಿಕತೆಯನ್ನು ನೋಡಿದರೆ, ಹಿಂದು ವಿರೋಧಿತನ, ಧರ್ಮ ಸಹಿಷ್ಣುತೆ ಇಲ್ಲದಿರುವುದು ಕಾಣುತ್ತಿದೆ. ಈ ಮಾನಸಿಕತೆ ಹೋಗಬೇಕಾಗಿದೆ. ಪ್ರಜಾ ಪ್ರಭುತ್ವವೆಂದರೆ ವೋಟಿಗಾಗಿ ಹೆತ್ತ ತಾಯಿಯ ಜುಟ್ಟನ್ನು ಹಿಡಿದುಕೊಂಡು ಒಪ್ಪಿಸುವಂತಹ ಮನಸ್ಥಿತಿ ಇದೆ. ಇದು ಹೋಗಬೇಕಾಗಿದೆ. ಆದರೆ ನಮ್ಮ ದೇಶದ ಸಾತ್ವಿಕರು ಮೌನದಿಂದಿರುವುದು ವಿಪರ್ಯಾಸವಾಗಿದೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ. ನಿಜವಾದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾಗಿದೆ. ಸತ್ಯ ಸಂಗತಿಗಳನ್ನು ತಿಳಿದುಕೊಂಡು ಜಾಗೃತರಾಗಬೇಕು, ಇತರರನ್ನು ಜಾಗೃತಗೊಳಿಸಬೇಕಾಗಿದೆ. ಇಲ್ಲದಿದ್ದರೆ ಭಾರತದ ನಿಜವಾದ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಸಂಸದ ಪ್ರತಾಪ್‌ಸಿಂಹ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ವಿಕ್ರಮ ಪತ್ರಿಕೆಯ ಸಂಪಾದಕ ವೃಷಾಂಕಭಟ್, ಲೇಖಕ ರೋಹಿತ್ ಚಕ್ರತೀರ್ಥ, ಅಯೋಧ್ಯಾ ಪ್ರಕಾಶನದ ಶಶಾಂಕ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!