ಪ್ರೊಡಕ್ಷನ್ ಆಫೀಸ್‌ ನಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಅಮೀರ್ ಖಾನ್: ಮಾಜಿ ಪತ್ನಿ ಕಿರಣ್ ರಾವ್ ಸಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒಂದು ಕಾಲದಲ್ಲಿ ಬಾಲಿವುಡ್‌ ಬಾದ್‌ ಷಾ ಆಗಿ ಮಿಂಚುತ್ತಿದ್ದ ಅಮೀರ್‌ ಖಾನ್‌ ಗೆ ಇತ್ತೀಚೆಗೆ ಯಾವ ಚಿತ್ರವೂ ಕೈಹಿಡಿಯುತ್ತಿಲ್ಲ. ಅಮೀರ್‌ ʼದೇಶ ಬಿಡುವ ಹೇಳಿಕೆʼ ಗೆ ಪ್ರತಿಯಾಗಿ ನೇಟಿಜನ್‌ ಗಳು ಬಾಯ್ಕಾಟ್‌ ಟ್ರೆಂಡ್‌ ಆರಂಭಿಸಿದ್ದರಿಂದ ಅವರು ಭಾರೀ ನಿರೀಕ್ಷೆಯಿಟ್ಟಿದ್ದ ʼಲಾಲ್ ಸಿಂಗ್ ಚಡ್ಡಾʼ ಹೀನಾಯವಾಗಿ ನೆಲಕಚ್ಚಿತ್ತು. ಇದರಿಂದ ವಿಚಲಿತರಾಗಿದ್ದ ಅಮೀರ್ ಸದ್ಯ ಚಿತ್ರರಂಗದಿಂದ ವಿಶ್ರಾಂತಿ ಪಡೆದಿದ್ದಾರೆ. ಈ ನಡುವೆ ಅಮೀರ್ ಇತ್ತೀಚೆಗೆ ತಮ್ಮ ಮಾಜಿ ಪತ್ನಿಯ ಜೊತೆಗೂಡಿ ತಮ್ಮ ಪ್ರೊಡಕ್ಷನ್ ಕಚೇರಿಯಲ್ಲಿ ಹಿಂದೂ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿರುವ ಫೋಟೋಗಳು ವೈರಲ್‌ ಆಗುತ್ತಿವೆ.
ಈ ಸಮಾರಂಭದ ಫೋಟೋಗಳನ್ನು ಲಾಲ್ ಸಿಂಗ್ ಚಡ್ಡಾ ನಿರ್ದೇಶಕ ಅದ್ವೈತ್ ಚಂದನ್ ಅವರು ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿಅಮೀರ್ ಖಾನ್ ತನ್ನ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ಸೇರಿ ಕಲಶವನ್ನು ಹಿಡಿದುಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಆರತಿ ಮಾಡುವುದನ್ನು ಕಾಣಬಹುದು. ಅಮಿರ್‌ ಸಂಪ್ರದಾಯ ಬದ್ಧವಾಗಿ ಶಾಲು ಹಾಗೂ ಟೋಪಿಯನ್ನು ಧರಿಸಿ, ಹಣೆಯಲ್ಲಿ ಕುಂಕುಮ ಇರಿಸಿಕೊಂಡು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಹಲವಾರು ಸಿಬ್ಬಂದಿಗಳು ಕೂಡ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಿದೆ.
ಪೋಸ್ಟ್ ಹಂಚಿಕೊಂಡಿರುವ ಅದ್ವೈತ್ ಚಂದನ್ ಅವರು ಪೂಜೆಯ ಉದ್ದೇಶವನ್ನು ಉಲ್ಲೇಖಿಸಿಲ್ಲ.
ಈ ವಾರದ ಆರಂಭದಲ್ಲಿ, ಅಮೀರ್ ಖಾನ್ ಅವರು ಒಂದು ವರ್ಷದ ನಂತರ ನಟನೆಗೆ ಮರಳುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸದ್ಯ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವುದಾಗಿ ನಟ ಹೇಳಿದರು.
“ನಾನು ಸದ್ಯ ಏನನ್ನೂ ಮಾಡುತ್ತಿಲ್ಲ, ನಾನು ಬಹಳ ದಿನಗಳಿಂದ ಕೆಲಸ ಮಾಡುತ್ತಿದ್ದೇನೆ, ಈಗ ನಾನು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತೇನೆ. ಪಾನಿ ಫೌಂಡೇಶನ್‌ ಕೆಲಸ ನಡೆಯುತ್ತಿದೆ. ಬಾಕಿ ಉಳಿದ ಇತರ ವಿಷಯಗಳಿವೆ. ನಾನು ಒಂದು ವರ್ಷದ ನಂತರ ಮತ್ತೆ ನಟನೆಗೆ ಬರುತ್ತೇನೆʼ ಎಂದು ಅಮೀರ್‌ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!