ಹೊಸದಿಗಂತ ವರದಿ, ಹುಬ್ಬಳ್ಳಿ:
ಇಲ್ಲಿಯ ಹು-ಧಾ ಪೂರ್ವ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಸೋಮವಾರ ಬಹಳಷ್ಟು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ತಹಶೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಸಿದ್ಧಾರೂಢ ಮಠದಿಂದ ಆರಂಭವಾದ ಮೆರವಣಿಗೆ ಹಳೇ ಹುಬ್ಬಳ್ಳಿ ವೃತ್ತ, ಕಸಬಾಪೇಟ ಮುಖ್ಯರಸ್ತೆ, ನ್ಯೂ ಇಂಗ್ಲಿಷ್ ಶಾಲೆ, ಮ್ಯಾದಾರ ಓಣಿ, ಡಾಕಾಪ್ಪ ವೃತ್ತ, ಪೆಂಡರಗಲ್ಲಿ, ದಾಜೀಬಾನ ಪೇಟೆ, ಕೋಪಿಕರ್ ರಸ್ತೆ ಮೂಲಕ ತಹಶೀಲ್ದಾರ ಕಚೇರಿಗೆ ಆಗಮಿಸಿತು.
ಬಿಸಲೂ ಲೆಕ್ಕಿಸದೆ ಬೆಂಬಲಿಗರು ಹಾಗೂ ಕಾರ್ಯಕರ್ತರು ಶಾಸಕ ಅಬ್ಬಯ್ಯ ಪರವಾಗಿ ಘೋಷಣೆಗೆ ಕೂಗಿ, ಪುಷ್ಪವೃಷ್ಟಿ ಗೈದು, ಬಣ್ಣ ಎರಚಿದರು. ಡೋಳುಕುಣಿತ, ಸಾಂಪ್ರದಾಯಿಕ ವಾದ್ಯ ಮೇಳಗಳು ಮೆರವಣಿಗೆ ಮೇರಗು ನೀಡಿದವು.
ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನಗರಕ್ಕೆ ಆಗಮಿಸುತ್ತಿದಂತೆ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ನಾಮಪತ್ರ ಸಲ್ಲಿಸಲು ಸಾಥ್ ನೀಡಿ, ಶುಭ ಕೋರಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ, ಕಳೆದ ಬಾರಿ ೨೦ ಸಾವಿರ ಅಂತರ ಮತಗಳಿಂದ ಜಯಗಳಿಸಿದ್ದೆ ಈ ಬಾರಿ ಅದಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪಕ್ಷಕ್ಕೆ ಸೇರಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಆನೆ ಬಲ ಬಂದಂತಾಗಿದೆ. ಈ ಬಾರಿ ಏಳು ಕ್ಷೇತ್ರದಲ್ಲಿ ಇಬ್ಬರು ಸೇರಿ ಗೆಲ್ಲಲು ಶ್ರಮಿಸುತ್ತೇವೆ. ಜಗದೀಶ ಶೆಟ್ಟರ ಜಾತ್ಯಾತೀತ ನಾಯಕರಾಗಿದ್ದಾರೆ ಎಂದು ಹೇಳಿದರು.